ಟೆಂಪೋ ಚಾಲಕನ ಕೊಲೆ ಪ್ರಕರಣ: 13 ಮಂದಿ ವಿರುದ್ಧ ಕೇಸು
ಕುಂದಾಪುರ, ಡಿ.18: ಕಾವ್ರಾಡಿ ಗ್ರಾಮದ ಟೆಂಪೋ ಚಾಲಕ ಬಾಬು ಶೆಟ್ಟಿ ಅವರ ಕೊಲೆಗೆ ಸಂಬಂಧಿಸಿದಂತೆ ತಮ್ಮ ಪ್ರಕಾಶ್ ಶೆಟ್ಟಿ ಅವರು ಒಟ್ಟು 13 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳಲ್ಲಿ ಬಾಬು ಶೆಟ್ಟಿ ಅವರ ಸಹೋದರರು ಸೇರಿದ್ದು, ಜಾಗದ ವಿಷಯದ ಕುರಿತಂತೆ ಇರುವ ತಕರಾರೇ ಕೊಲೆಗೆ ಕಾರಣ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಾಬು ಶೆಟ್ಟಿ ಅವರ ಅಕ್ಕನ ಗಂಡ ಆನಂದ ಶೆಟ್ಟಿ ಈ ಹಿಂದೆ ಕರ್ಕುಂಜೆ ಗ್ರಾಮದ ಅಸೋಡಿಯ ಗಿರಿಜಮ್ಮ ಶೆಡ್ತಿಯವರ ಕರ್ಕುಂಜೆ ಗ್ರಾಮದ ಕಮ್ರಾಡಿ ಎಂಬಲ್ಲಿ ಕೃಷಿ ಜಮೀನು ಖರೀದಿಸಿದ್ದು, ಈ ಜಾಗಕ್ಕೆ ಸಂಬಂಧಿಸಿದ ಕುಮ್ಕಿ ಜಾಗದ ಎಗ್ರಿಮೆಂಟ್ ವಿಷಯದಲ್ಲಿ ಆರೋಪಿಗಳಿಗೂ ಹಾಗೂ ಬಾವ ಆನಂದ ಶೆಟ್ಟಿ ಅವರಿಗೂ ತಕರಾರಿದ್ದು, ಈ ವೇಳೆ ಬಾಬು ಶೆಟ್ಟಿ ಅವರು ಅಕ್ಕ-ಭಾವನ ಪರವಾಗಿ ಮಾತನಾಡಿರುವುದೇ ಈ ಕೊಲೆಗೆ ಮೂಲ ಕಾರಣ ಎಂದು ಆರೋಪಿಸಲಾಗಿದೆ.
ಇದೇ ದ್ವೇಷದಿಂದ ಅಣ್ಣ ಬಾಬು ಶೆಟ್ಟಿ ಅವರನ್ನು ಆರೋಪಿಗಳಾದ ಸಂತೋಷ ಶೆಟ್ಟಿ, ತೇಜಪ್ಪ ಶೆಟ್ಟಿ, ಶೇಖರ ಶೆಟ್ಟಿ, ಪ್ರಕಾಶ ಶೆಟ್ಟಿ ಕೊಡ್ಲಾಡಿ, ಉದಯ ಶೆಟ್ಟಿ, ರವಿರಾಜ ಶೆಟ್ಟಿ, ನಾಗರಾಜ ದೇವಾಡಿಗ, ಸುಕೇಶ ಮೂಡುಬಗೆ ನಾರುಮಕ್ಕಿ, ಶಂಕರ ಶೆಟ್ಟಿ, ಸುರೇಶ ಶೆಟ್ಟಿ ಕೊಕ್ಕೂಡು, ಗೋಪಾಲ ಶೆಟ್ಟಿ ಅಸೋಡಿ, ಕುಷ್ಟಪ್ಪ ಶೆಟ್ಟಿ ಅಸೋಡಿ ಹಾಗೂ ಪ್ರಸಾದ ಶೆಟ್ಟಿ ಅವರು ಇತರರೊಂದಿಗೆ ಸೇರಿಕೊಂಡು ಮಾರಕಾಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪ್ರಕಾಶ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







