ಗಾಂಧಿ ಸೇರಿ ಎಲ್ಲಾ ಚಿಂತಕರ ಚಿಂತನೆಗಳು ‘ಸ್ಲೋಗನ್’ ರೀತಿ ಬಳಕೆ: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ವಿವೇಕ ರೈ

ಉಡುಪಿ, ಡಿ.18: ಇಂದಿನ ದಿನಗಳಲ್ಲಿ ಗಾಂಧೀಜಿ ಸೇರಿದಂತೆ ನಮ್ಮೆಲ್ಲಾ ಚಿಂತಕರ ಚಿಂತನೆಗಳು ‘ಸ್ಲೋಗನ್’ ರೀತಿಯಲ್ಲಿ ಬಳಕೆಯಾಗುತ್ತಿವೆ. ಅವುಗಳನ್ನು ಇಂದಿನ ಸಮಸ್ಯೆಗಳಿಗೆ ಮುಖಾಮುಖಿಯಾಗಿಸಿ ವಿಶ್ಲೇಷಿಸುವ ಪರಿಪಾಠವೇ ಇಲ್ಲವಾಗಿದೆ. ಇಂದಿನ ರಾಜಕೀಯ ಸ್ಲೋಗನ್‌ಗಳಿಂದ ಪ್ರಭಾವಿತವಾಗಿದೆ ಎಂದು ತುಳು ಮತ್ತು ಕನ್ನಡ ವಿದ್ವಾಂಸ, ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಡಾ.ಎನ್.ತಿರುಮಲೇಶ್ವರ ಭಟ್ ಇವರ ‘ಪೋಲ್ಸ್ ಅಪಾರ್ಟ್, ರೋಲ್ಸ್ ಅಲೈಕ್’ ಆಂಗ್ಲ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಆದರೆ ಆಂಗ್ಲ ಹಾಗೂ ಜರ್ಮನ್ ಭಾಷೆಯ ಪ್ರಾದ್ಯಾಪಕರಾಗಿರುವ ಡಾ.ಎನ್.ಟಿ.ಭಟ್ ಅವರು ಜರ್ಮನಿಯ ಖ್ಯಾತ ಲೇಖಕ, ಸಾಹಿತಿ, ಚಿಂತಕ ಐನ್ರಿಚ್ ಬೇಲ್ಸ್‌ರ ಕೃತಿಗಳಲ್ಲಿ ಗಾಂಧೀಜಿಯವರ ಆತ್ಮವನ್ನು ಹುಡುಕಾಡಿ, ವಿಶ್ಲೇಷಣಾತ್ಮಕವಾಗಿ ಸುಂದರವಾದ ಈ ಕೃತಿಯನ್ನು ರಚಿಸಿದ್ದಾರೆ ಎಂದರು.
ಉತ್ತಮ ಅನುವಾದಕರೂ ಆಗಿರುವ ಡಾ.ಭಟ್ ಅವರು ಕನ್ನಡದಿಂದ ಆಂಗ್ಲ ಹಾಗೂ ಜರ್ಮನ್ ಭಾಷೆಗೆ ಅನುವಾದ ಮಾಡುವಲ್ಲಿ ಹೆಚ್ಚೆಚ್ಚು ಮುತುವರ್ಜಿ ತೋರಿಸಬೇಕು ಎಂದು ಹೇಳಿದ ಅವರು, ಈ ಕೃತಿಯಲ್ಲಿ ಅವರು ಗಾಂಧೀಜಿಯ ಆತ್ಮದ ಪರಿಶೋಧನೆ ನಡೆಸಿ ಜರ್ಮನ್ ಲೇಖಕನ ಕೃತಿಯನ್ನು ವಿಮರ್ಶಿಸಿದ್ದಾರೆ ಎಂದರು.
ಗಾಂಧೀಜಿ ಅವರು ಬದುಕು, ಚಿಂತನೆ, ತತ್ವಗಳ ಬಗ್ಗೆ ಸಾಕಷ್ಟು ಸಾಮಗ್ರಿಗಳು ಲಭ್ಯವಿದೆ. ಅವುಗಳು ಇಂದಿನ ಸಂದರ್ಭಕ್ಕೆ ಹೇಗೆ ಪ್ರಸ್ತುತ ಎನ್ನುವ ಬಗ್ಗೆ ಜಿಜ್ಞಾಸೆ ನಡೆಯಬೇಕಾಗಿದೆ. ಅವರ ಅಹಿಂಸೆ, ಸತ್ಯ, ಸತ್ಯಾಗ್ರಹ, ಪ್ರತಿಶೋಧಗಳು ಬದಲಾದ ಬಗ್ಗೆ ಚರ್ಚೆಯಾಗಬೇಕಿದೆ. ಈ ಚರ್ಚೆಯನ್ನು ಡಾ.ಭಟ್ ಕೃತಿಯಲ್ಲಿ ನಡೆಸಿದ್ದಾರೆ ಎಂದು ಡಾ.ರೈ ನುಡಿದರು.
ಲೇಖಕ ಡಾ.ಎನ್.ತಿರುಮಲೇಶ್ವರ ಭಟ್ ಅವರು ಕೃತಿ ಮೂಡಿಬಂದ ಕುರಿತು ವಿವರಗಳನ್ನು ನೀಡಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಣಿಪಾಲ ಎಂಐಸಿಯ ಪ್ರೊ.ಅನುಪಾ ಲೂವಿಸ್ ಕೃತಿ ಪರಿಚಯ ಮಾಡಿದರು. ಪ್ರೊ.ಎಂ.ಎಲ್.ಸಾಮಗ ವಂದಿಸಿ, ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.








