ಬೆಂಗಳೂರಿನಲ್ಲಿ ದಲಿತ ಯುವಕರ ಹತ್ಯೆ ಹೆಚ್ಚಾಗುತ್ತಿದೆ: ಬಿಎಸ್ಪಿ ರಾಜ್ಯ ಸಂಯೋಜಕ ಮುನಿಯಪ್ಪ
ದಲಿತ ಯುವಕ ಭರತ್ ಹತ್ಯೆ ಖಂಡಿಸಿ ಪ್ರತಿಭಟನೆ

ಭರತ್
ಬೆಂಗಳೂರು, ಡಿ.18: ದಲಿತ ಯುವಕರಿಗೆ ರೌಡಿಗಳ ಪಟ್ಟಕಟ್ಟಿ ಹತ್ಯೆ ಮಾಡುವಂತಹ ಕೃತ್ಯಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಈ ಹತ್ಯೆಗಳಿಗೆ ಸ್ಥಳೀಯ ರಾಜಕಾರಣಿಗಳ ಬೆಂಬಲವಿದೆ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ ದುಷ್ಕರ್ಮಿಗಳು ದಲಿತ ಯುವಕ ಭರತ್ ಎಂಬುವನನ್ನು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪೊಲೀಸರ ಕ್ರಮವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆದಿರುವ ಹತ್ಯೆಗಳನ್ನು ಗಮನಿಸಿದರೆ ದಲಿತ ಯುವಕರ ಸಂಖ್ಯೆ ಹೆಚ್ಚಾಗಿದೆ. ದಲಿತ ಯುವಕರಿಗೆ ರೌಡಿಯೆಂಬ ಹಣೆಪಟ್ಟಿ ಕಟ್ಟಿ ವ್ಯವಸ್ಥಿತವಾಗಿ ಹತ್ಯೆ ಮಾಡುವಂತಹ ಷಡ್ಯಂತ್ರಗಳು ನಡೆಯುತ್ತಿವೆ. ಈ ಹತ್ಯೆಗಳ ಹಿಂದೆ ಸ್ಥಳೀಯ ರಾಜಕಾರಣಿಗಳ ಕೈವಾಡವಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಅವರು ಒತ್ತಾಯಿಸಿದರು.
ದಲಿತ ಯುವಕ ಭರತ್ ಹತ್ಯೆ ಆರೋಪಿಗಳನ್ನು 15 ದಿನಗಳಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಈ ಪ್ರಕರಣದ ಸಂಬಂಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಸಂಬಂಧಿಸಿದ ಪೊಲೀಸರನ್ನು ಅಮಾನತು ಮಾಡಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಲಕ್ಷ್ಮಿ ನಾರಾಯಣ ನಾಗವಾರ, ಎನ್.ಮೂರ್ತಿ, ಮಾರಪ್ಪ, ಮುನಿ ಅಂಜಿನಪ್ಪ, ಹೆಬ್ಬಾಳ ವೆಂಕಟೇಶ್, ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







