ಕನ್ನಡಕ್ಕೆ ಮಾನ್ಯತೆ ನೀಡದ ಮಳಿಗೆಗಳ ನಾಮಫಲಕ ತೆರವು

ಬೆಂಗಳೂರು, ಡಿ.18: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಳಿಗೆಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಬಳಸುವಂತೆ ಬಿಬಿಎಂಪಿ ಸೂಚಿಸಿತ್ತು. ಆದರೆ, ಇದುವರೆಗೂ ಮಳಿಗೆಗಳ ನಾಮಫಲಕದಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿ, ನಾಮಫಲಕ ತೆರೆವುಗೊಳಿಸಿದ್ದಾರೆ.
ಜಯನಗರದಲ್ಲಿ ಆಪರೇಷನ್ ನೇಮ್ ಬೋರ್ಡ್ ಸ್ಟಾರ್ಟ್ ಮಾಡಿರುವ ಅಧಿಕಾರಿಗಳು ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಗಳ ನಾಮಫಲಕ ತೆರವುಗೊಳಿಸುತ್ತಿದ್ದಾರೆ. ಬಿಬಿಎಂಪಿ ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತಿದ್ದು, ಕನ್ನಡ ನಾಮಫಲಕ ಹಾಕದ ಮಳಿಗೆಗಳ ಬೋರ್ಡ್ ತೆರವುಗೊಳಿಸಲಾಗುತ್ತಿದೆ. ಮಾರ್ಷಲ್ಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಡೆಡ್‌ಲೈನ್ ಮುಗಿದರೂ ಸಹ ಕನ್ನಡ ನಾಮಫಲಕ ಅಳವಡಿಸಲು ಹಿಂದೇಟು ಹಾಕಿರುವ ಮಾಲಕರ ವಿರುದ್ಧ ಪಾಲಿಕೆ ಶಿಸ್ತುಕ್ರಮಕ್ಕೂ ಮುಂದಾಗಿದೆ. ಇಂದಿನಿಂದ ನಿರಂತರವಾಗಿ ನಾಮಫಲಕ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ನಾಮಫಲಕವನ್ನು ಬಿಬಿಎಂಪಿ ಈಗಾಗಲೇ ಕಡ್ಡಾಯ ಮಾಡಿದೆ. ನಗರದ ಎಲ್ಲ ಅಂಗಡಿಗಳ ನಾಮಫಲಕಗಳಲ್ಲೂ ಶೇ.60ರಷ್ಟು ದೊಡ್ಡದಾಗಿ ಕನ್ನಡದಲ್ಲೇ ಹೆಸರು ಇರಬೇಕು ಎಂದು ಸೂಚನೆ ನೀಡಿದೆ. ಆದರೆ, ಡೆಡ್‌ಲೈನ್ ಮುಗಿದರೂ ಹಲವು ಅಂಗಡಿ ಮಾಲಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಸದ್ಯ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಕನ್ನಡಕ್ಕೆ ಮಾನ್ಯತೆ ನೀಡದ ನಾಮಫಲಕಗಳನ್ನ ತೆರವುಗೊಳಿಸುತ್ತಿದ್ದಾರೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.





