ನನ್ನ ಎಡಗಣ್ಣಿಗೆ ಲಾಠಿ ಏಟು ಬಿದ್ದು ರಕ್ತ ಹರಿಯಿತು: ದೃಷ್ಟಿ ಕಳೆದುಕೊಂಡ ಜಾಮಿಯಾ ವಿದ್ಯಾರ್ಥಿ

ಫೋಟೊ ಕೃಪೆ: indianexpress
ಹೊಸದಿಲ್ಲಿ, ಡಿ.18: “ನಾವು ಲೈಬ್ರೆರಿಯಲ್ಲಿ ಎಂಫಿಲ್ ಸೆಕ್ಷನ್ ನಡೆಯುತ್ತಿತ್ತು. ಆಗ ಏಕಾಏಕಿ ವಿವಿಯ ಲೈಬ್ರೆರಿಗೆ ನುಗ್ಗಿದ 20ರಿಂದ 25ರಷ್ಟು ಶಸ್ತ್ರಸಜ್ಜಿತ ಪೊಲೀಸರು ಅಲ್ಲಿದ್ದ ಎಲ್ಲರ ಮೇಲೂ ಲಾಠಿ ಬೀಸಿದರು. ಅವರಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಓಡಿದರೂ ಬೆನ್ನಟ್ಟಿ ಬಂದು ಥಳಿಸಿದರು” ಎಂದು ವಿವಿಯ ವಿದ್ಯಾರ್ಥಿಗಳು ಹೇಳಿದ್ದಾರೆ.
ರವಿವಾರ ಜಾಮಿಯಾ ಮಿಲ್ಲಿಯಾ ವಿವಿ ಆವರಣದೊಳಗೆ ನುಗ್ಗಿದ ಪೊಲೀಸರ ಲಾಠಿ ಏಟಿನಿಂದ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿರುವ ಸ್ನಾತಕೋತ್ತರ ಕಾನೂನು ಪದವಿ ವಿದ್ಯಾರ್ಥಿ ಮಿನಾಜುದ್ದೀನ್ಗೆ ಈಗ ಬಲಕಣ್ಣಿನ ದೃಷ್ಟಿಯೂ ನಷ್ಟವಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲೈಬ್ರೆರಿಯಲ್ಲಿದ್ದಾಗ ಕೆಲವರು ಬಂದು ‘ಪೊಲೀಸರು ವಿವಿಯ ಆವರಣದೊಳಗೆ ನುಗ್ಗಿದ್ದಾರೆ’ ಎಂದು ತಿಳಿಸಿದರು. ಅಷ್ಟರಲ್ಲೇ 20ರಿಂದ 25ರಷ್ಟು ಪೊಲೀಸರು(ಹೆಲ್ಮೆಟ್ ಧರಿಸಿ ಲಾಠಿ ಹಿಡಿದಿದ್ದರು) ಲೈಬ್ರೆರಿಗೆ ನುಗ್ಗಿ ಸಿಕ್ಕವರ ಮೇಲೆ ಲಾಠಿ ಪ್ರಯೋಗಿಸತೊಡಗಿದರು . ನನ್ನ ಎಡಗಣ್ಣಿನ ಮೇಲ್ಭಾಗಕ್ಕೆ ಲಾಠಿ ಏಟು ಬಿತ್ತು. ರಕ್ತ ಹರಿಯುತ್ತಿರುವಂತೆಯೇ ಅಲ್ಲಿಂದ ಶೌಚಾಲಯದತ್ತ ಓಡಿದೆ. ರಕ್ತದ ಮಧ್ಯೆ ಬಿದ್ದಿದ್ದ ನನ್ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದವರು ವಿವರಿಸಿದ್ದಾರೆ.
ಮಿನಾಜುದ್ದೀನ್ ಶೌಚಾಲಯದ ಹೊರಗೆ ತಲೆಯಿಂದ ರಕ್ತ ಸುರಿಯುತ್ತಿರುವ ಸ್ಥಿತಿಯಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ವೀಡಿಯೊ ದೃಶ್ಯಾವಳಿ ವೈರಲ್ ಆಗಿದ್ದು, ಆ ಘಟನೆಯ ಭಯಾನಕತೆಗೆ ಸಾಕ್ಷಿಯಾಗಿದೆ. ಇದೇ ರೀತಿಯ ಮತ್ತೊಂದು ವೀಡಿಯೊದಲ್ಲಿ ಗುಂಡಿನ ಸದ್ದು ಕೇಳಿಬರುತ್ತಿದ್ದಂತೆಯೇ ಲೈಬ್ರೆರಿಯಲ್ಲಿದ್ದ ವಿದ್ಯಾರ್ಥಿಗಳು ರಕ್ಷಣೆಗಾಗಿ ದಿಕ್ಕೆಟ್ಟು ಓಡುತ್ತಿರುವ, ನೆಲದ ಮೇಲೆಲ್ಲಾ ಪುಸ್ತಕಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ, ಅಲ್ಲೇ ಪಕ್ಕದಲ್ಲಿ ಅಶ್ರುವಾಯು ಶೆಲ್ ಬಿದ್ದಿರುವ ದೃಶ್ಯಗಳಿವೆ. ಅಲ್ಲದೆ ಅಶ್ರುವಾಯುವಿನ ಹೊಗೆ ಲೈಬ್ರೆರಿಯನ್ನು ಆವರಿಸಿದಾಗ ವಿದ್ಯಾರ್ಥಿಯೊಬ್ಬ- ದಯವಿಟ್ಟು ಯಾರಾದರೂ ಫ್ಯಾನ್ ಆನ್ ಮಾಡಿ ಎಂದು ಕೂಗುತ್ತಿರುವ ಧ್ವನಿಯೂ ವೀಡಿಯೊದ ಜತೆಗಿದೆ.
ವಿದ್ಯಾರ್ಥಿಗಳನ್ನು ಸುತ್ತುವರಿದ ಪೊಲೀಸರು ಕೈಮೇಲೆತ್ತಿ ಹಿಡಿದುಕೊಂಡು ಹೊರಗೆ ಹೋಗುವಂತೆ ಸೂಚಿಸುವ ದೃಶ್ಯವೂ ವೀಡಿಯೋದಲ್ಲಿದೆ. ಲೈಬ್ರೆರಿಯಲ್ಲಿದ್ದ ತನ್ನನ್ನು ಅಲ್ಲಿಂದ ಎಬ್ಬಿಸಿದ ಪೊಲೀಸರು ಬಂಧಿಸಿ ಕರೆದೊಯ್ದರು ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದ್ದಾಳೆ. ಘಟನೆ ನಡೆದಾಗ ತಾನು ವಿವಿಯ ಲೈಬ್ರೆರಿಯಲ್ಲಿದ್ದೆ. ಆಗ ಪೊಲೀಸರು ಎರಡು-ಮೂರು ಅಶ್ರುವಾಯು ಶೆಲ್ಗಳನ್ನು ವಿದ್ಯಾರ್ಥಿಗಳತ್ತ ಎಸೆದಿದ್ದಾರೆ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಎಲ್ಲಾ ಆರೋಪಗಳನ್ನೂ ನಿರಾಕರಿಸಿರುವ ಪೊಲೀಸರು, ಹಿಂಸಾಚಾರ ನಡೆಸಿದ ಗುಂಪು ವಿವಿಯ ಲೈಬ್ರೆರಿಯೊಳಗೆ ಪ್ರವೇಶಿಸಿದ್ದನ್ನು ಕಂಡ ಬಳಿಕವೇ ಪೊಲೀಸರು ಅವರನ್ನು ಹಿಂಬಾಲಿಸಿದ್ದಾರೆ. ಅಲ್ಲದೆ ಪೊಲೀಸರು ಗುಂಡು ಹಾರಿಸಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.







