ಜೆಎನ್‌ಯು ಕುಲಪತಿಯಿಂದ ದುರಾಡಳಿತ: ರಾಷ್ಟ್ರಪತಿಗೆ ಅಧ್ಯಾಪಕರ ಸಂಘಟನೆಯ ಪತ್ರ

ಹೊಸದಿಲ್ಲಿ, ಡಿ. 18: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುಲಪತಿ ಎಂ. ಜಗದೀಶ್ ಕುಮಾರ್ ಅವರ ದುರಾಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜೆಎನ್‌ಯು ಅಧ್ಯಾಪಕರ ಸಂಘಟನೆ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬಹಿರಂಗ ಪತ್ರ ಬರೆದಿದೆ.
ವಿಶ್ವವಿದ್ಯಾನಿಲಯದ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಪ್ರತಿ ಪ್ರಯತ್ನವನ್ನು ಕುಲಪತಿ ಜಗದೀಶ್ ಕುಮಾರ್ ಅವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಹಾಸ್ಟೆಲ್ ಹಾಗೂ ಭೋಜನಾಲಯದ ಶುಲ್ಕ ಹೆಚ್ಚಿಸುವ ವಿಶ್ವವಿದ್ಯಾನಿಲಯ ಆಡಳಿತದ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ವಿ.ವಿ.ಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಶುಲ್ಕ ಹೆಚ್ಚಳ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಲು, ಪೊಲೀಸರೊಂದಿಗೆ ಘರ್ಷಣೆ ಸಂಭವಿಸಲು ಹಾಗೂ ಹಾಸ್ಟೆಲ್‌ನಲ್ಲಿ ದಾಂಧಲೆ ನಡೆಯಲು ಕಾರಣವಾಗಿತ್ತು.
ಬಿಕ್ಕಟ್ಟು ಪರಿಹರಿಸುವ ಮೊದಲ ಹಂತವಾಗಿ ವಿದ್ಯಾರ್ಥಿಗಳ ಒಕ್ಕೂಟವನ್ನು ಗುರುತಿಸುವಂತೆ ಹಾಗೂ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಲಾಗಿರುವ ಪೊಲೀಸ್ ದೂರನ್ನು ಹಿಂದೆಗೆಯುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸಲಹೆ ನೀಡಿತ್ತು. ಬಿಕ್ಕಟ್ಟು ಪರಿಹರಿಸಲು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಸಚಿವಾಲಯ ಡಿಸೆಂಬರ್ 12ರಂದು ಹೇಳಿಕೆ ನೀಡಿತ್ತು. ಸಭೆಯ ಸಂದರ್ಭ ತೃಪ್ತಿಕರ ಪರಿಹಾರ ಕಂಡುಕೊಳ್ಳುವ ಸಲುವಾಗಿ ವಿಶ್ವವಿದ್ಯಾನಿಲಯದ ಎಲ್ಲ ಪಾಲುದಾರರು ಹೊಂದಿಕೊಳ್ಳುವ ಕ್ರಮವನ್ನು ಅನುಸರಿಸಬೇಕು ಹಾಗೂ ಕ್ಯಾಂಪಸ್‌ನಲ್ಲಿ ಕಳೆದ ಒಂದು ತಿಂಗಳಿಂದ ಇರುವ ಬಿಕ್ಕಟ್ಟಿನ ಪರಿಸ್ಥಿತಿ ಅಂತ್ಯಗೊಳಿಸಬೇಕು. ಜೆಎನ್‌ಯು ಆಡಳಿತ ವಿದ್ಯಾರ್ಥಿಗಳ ಬಗ್ಗೆ ಮೃಧು ಧೋರಣೆ ತಳೆಯಬೇಕು ಎಂದು ಸಚಿವಾಲಯ ಹೇಳಿತ್ತು. ‘‘ಬಿಕ್ಕಟ್ಟು ಪರಿಹರಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದ ಉಪಕ್ರಮಗಳನ್ನು ಕುಮಾರ್ ಅವರು ಅಹಂಕಾರದಿಂದ ನಿರ್ಲಕ್ಷಿಸಿದ್ದಾರೆ’’ ಎಂದು ಅಧ್ಯಾಪಕರ ಸಂಘಟನೆ ರಾಷ್ಟ್ರಪತಿ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಹೇಳಿದೆ.







