400 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ 8ನೇ ಬ್ಯಾಟ್ಸ್‌ಮನ್ ಕೊಹ್ಲಿ

ವಿಶಾಖಪಟ್ಟಣ, ಡಿ.18: ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 400 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ 8ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧ ಬುಧವಾರ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿ 2008ರಲ್ಲಿ ಶ್ರೀಲಂಕಾದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಈ ತನಕ 241 ಏಕದಿನ, 84 ಟೆಸ್ಟ್ ಹಾಗೂ 75 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕೊಹ್ಲಿ ಅವರಲ್ಲದೆ, ಸಚಿನ್ ತೆಂಡುಲ್ಕರ್(664), ಎಂ.ಎಸ್. ಧೋನಿ(538), ರಾಹುಲ್ ದ್ರಾವಿಡ್(509), ಮುಹಮ್ಮದ್ ಅಝರುದ್ದೀನ್(433), ಸೌರವ್ ಗಂಗುಲಿ(424), ಅನಿಲ್ ಕುಂಬ್ಳೆ(403) ಹಾಗೂ ಯುವರಾಜ್ ಸಿಂಗ್(402) ಅವರು 400 ಹಾಗೂ ಅದಕ್ಕಿಂತ ಹೆಚ್ಚು ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ ಕೊಹ್ಲಿ ಈ ಮೈಲುಗಲ್ಲು ತಲುಪಿದ ವಿಶ್ವದ 33ನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಭಾರತದ ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ ಗರಿಷ್ಠ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ಧನೆ(652), ಕುಮಾರ ಸಂಗಕ್ಕರ(594), ಸನತ್ ಜಯಸೂರ್ಯ(586) ಆಸ್ಟ್ರೇಲಿಯದ ರಿಕಿ ಪಾಂಟಿಂಗ್(560) ಆ ಬಳಿಕದ ಸ್ಥಾನದಲ್ಲಿದ್ದಾರೆ.





