ಸಿಎಎ-ಎನ್‌ಆರ್‌ಸಿ ವಿರುದ್ಧ ಭುಗಿಲೆದ್ದ ಆಕ್ರೋಶ: ನಿಷೇಧಾಜ್ಞೆ ಲೆಕ್ಕಿಸದೆ ರಾಜ್ಯದೆಲ್ಲೆಡೆ ಪ್ರತಿಭಟನೆ

ಬೆಂಗಳೂರು, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಪ್ರಕ್ರಿಯೆ ಸಂಬಂಧ ಪ್ರತಿಭಟನೆ ನಡೆಸದಂತೆ ಮೂರು ದಿನಗಳ ಕಾಲ ವಿಧಿಸಿದ್ದ ನಿಷೇಧಾಜ್ಞೆ ನಡುವೆಯೂ ರಾಜಧಾನಿ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬೃಹತ್ ಪ್ರತಿಭಟನಾ ಮೆರವಣಿಗೆಗಳು ನಡೆಸಿ, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಪಿಐ, ಸಿಪಿಎಂ ಸೇರಿ ಎಡಪಕ್ಷಗಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಿದ್ದ ದೇಶ್ಯಾದ್ಯಂತ ಮುಷ್ಕರ ಬೆಂಬಲಿಸಿ ಗುರುವಾರ ಬೆಂಗಳೂರು, ಕಲಬುರ್ಗಿ, ಬಳ್ಳಾರಿ, ದಾವಣಗೆರೆ, ವಿಜಯಪುರ, ಮೈಸೂರು, ಕೋಲಾರ ಸೇರಿದಂತೆ ಹಲವು ಕಡೆ ಶಾಂತಿಯುತವಾಗಿಯೆ ಪ್ರತಿಭಟನೆ ಜರುಗಿತು.
ಬೆಂಗಳೂರಿನ ಪುರಭವನ ಮುಂಭಾಗ, ಮೈಸೂರು ಬ್ಯಾಂಕ್ ವೃತ್ತ, ಎಸ್ಪಿ ರಸ್ತೆಯ ಮೂಲಕ ಜಮಾಯಿಸಿದ ಸಾವಿರಾರು ನಾಗರಿಕರು, ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ಕಲಬುರ್ಗಿ ಬಂದ್ ಯಶಸ್ವಿಯಾಗಿದ್ದು, ಸಹಸ್ರಾರು ಮಂದಿ ನಗರದೆಲ್ಲೆಡೆ ಮೆರವಣಿಗೆ ನಡೆಸಿದರು. ಅದೇ ರೀತಿ, ಮೈಸೂರಿನ ಮಿಲಾದ್ ಪಾರ್ಕ್‌ನಲ್ಲೂ ಭಾರೀ ಸಂಖ್ಯೆಯಲ್ಲಿ ಜನತೆ ಕಾಯ್ದೆ ವಿರುದ್ಧ ಪ್ರತಿಭಟಿಸಿದರು.
ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ. ದೇಶದ ಅಭದ್ರತೆ ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ. ದೇಶವಾಸಿಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ, ಕೋಮು ಸೌಹಾರ್ದ ನಾಶ ಮಾಡುವ, ಕೋಮು ವಿಷ ಬೀಜ ಬಿತ್ತುವ ಹಾಗೂ ಮಾನವೀಯತೆಗೆ ವಿರುದ್ಧವಾಗಿವೆ. ಹಾಗಾಗಿ ಕೂಡಲೇ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರ ಸರಕಾರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮಸೂದೆ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿನ ಮುಸ್ಲಿಮ್ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಿತ್ತು. ಆದರೆ, ಆ ರೀತಿ ಮಾಡದೆ ದೇಶಾದ್ಯಂತ ವಿನಾಕಾರಣ ಗೊಂದಲಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶವನ್ನು ಧರ್ಮ-ಜಾತಿಯ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ರಾಜಕೀಯದ ಮೂಲಕ ಅಧಿಕಾರದಲ್ಲಿರುವ ಬಿಜೆಪಿ ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯಲು ಅನೇಕ ಭಾವನಾತ್ಮಕ ವಿಷಯಗಳನ್ನು ಬಳಕೆ ಮಾಡುತ್ತಿದೆ ಎಂದು ಹೋರಾಟ ಗಾರರು ದೂರಿದರು.
ವಶಕ್ಕೆ: ಇತಿಹಾಸಕಾರ ರಾಮಚಂದ್ರಗುಹಾ, ಹೋರಾಟಗಾರರಾದ ಜಿ.ಎನ್. ನಾಗರಾಜ್, ಕೆ.ಎಸ್.ವಿಮಲಾ, ಜ್ಯೋತಿ ಅನಂತ್‌ಸುಬ್ಬರಾವ್, ಎಸ್.ವರಲಕ್ಷ್ಮಿ, ಡಾ.ಎಚ್.ವಿ.ವಾಸು ಸೇರಿದಂತೆ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ನಾಲ್ಕು ಗಂಟೆಯ ನಂತರ ಬಿಡುಗಡೆ ಮಾಡಿದರು.
ಗುಹಾ ಮೇಲೆ ಹಲ್ಲೆಗೆ ಯತ್ನ, ಬಂಧನ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಇಲ್ಲಿನ ಪುರಭವನ ಮುಂಭಾಗ ಪ್ರತಿಭಟನೆಗೆ ಧಾವಿಸಿದ್ದ ರಾಮಚಂದ್ರ ಗುಹಾ ಅವರನ್ನು ವಶಕ್ಕೆ ಪಡೆಯುವ ವೇಳೆ, ಕೆಲ ಪೊಲೀಸ್ ಸಿಬ್ಬಂದಿ ಹಲ್ಲೆಗೆ ಯತ್ನಿಸಿ, ಎಳೆದೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದ ಪ್ರಸಂಗ ಜರುಗಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗಾಂಧೀಜಿಯ ಫೋಟೊ ಹಿಡಿದುಕೊಂಡು ಸಂವಿಧಾನದ ಕುರಿತು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದಾಗಲೇ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಪೊಲೀಸರು ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಪಕ್ಷಪಾತದಿಂದ ಕೂಡಿರುವ ಕಾಯ್ದೆಯ ವಿರುದ್ಧ ನಾವೆಲ್ಲರೂ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಎಲ್ಲರೂ ಶಾಂತಿಯುತವಾಗಿಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನಿಮಗೆ ಏನಾದರೂ ಹಿಂಸೆ ಕಾಣಿಸಿದೆಯೇ ಎಂದು ಗುಹಾ ಪ್ರಶ್ನಿಸಿದರು.
ರಿಝ್ವನ್ ಅರ್ಶದ್, ವಾಟಾಳ್ ವಶಕ್ಕೆ
ಶಿವಾಜಿನಗರ ಶಾಸಕ ರಿಝ್ವಾನ್ ಅರ್ಶದ್ ಅವರನ್ನು ಇಲ್ಲಿನ ಪುರಭವನ ಮುಂಭಾಗ ಪ್ರತಿಭಟನಾ ಸ್ಥಳದಲ್ಲಿಯೇ ವಶಕ್ಕೆ ಪಡೆದರೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸದಾಶಿವ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದರು. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಾಟಾಳ್ ಅವರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದ ಪೊಲೀಸರು, ನಿಷೇಧಾಜ್ಞೆ ಹಿನ್ನೆಲೆ ಪುರಭವನ ಹಾಗೂ ಪ್ರತಿಭಟನಾಕಾರರೊಂದಿಗೆ ಜೊತೆಗೂಡದಂತೆ ಸೂಚಿಸಿದರು ಎನ್ನಲಾಗಿದೆ.
ಸಂಚಾರ ದಟ್ಟಣೆ
ಇಲ್ಲಿನ ಪುರಭವನ ವೃತ್ತ, ಜೆಸಿ ರಸ್ತೆ, ನೃಪತುಂಗ ರಸ್ತೆ, ಬನ್ನಪ್ಪ ಪಾರ್ಕ್, ಕೆಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿಯೇ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹಲವು ಕಡೆ ಗಂಟೆಗಟ್ಟಲೆ ವಾಹನ ಸವಾರರು ರಸ್ತೆಯಲ್ಲಿಯೇ ಕಾಲ ಕಳೆದ ದೃಶ್ಯ ಕಂಡಿತು.
ರಸ್ತೆಯಲ್ಲಿಯೇ ನಮಾಝ್
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನ ಪುರಭವನ ಮುಂಭಾಗ ನಡೆದ ಪ್ರತಿಭಟನೆ ವೇಳೆ ಇಲ್ಲಿನ ಎಸ್ಪಿ ರಸ್ತೆಯ ಬಿಎಂಟಿಸಿ ಬಸ್ ನಿಲ್ದಾಣ ಮುಂಭಾಗ, ಹಲವು ಮಂದಿ ನಮಾಝ್ ಮಾಡಿದರು.
ಬೀಡುಬಿಟ್ಟ ಪೊಲೀಸರು
ನಗರದೆಲ್ಲೆಡೆ ನಿಷೇಧಾಜ್ಞೆ ಜಾರಿ ಹಿನ್ನೆಲೆ ವಿಧಾನಸೌಧ, ಸರಕಾರಿ ಕಟ್ಟಡಗಳು ಸೇರಿದಂತೆ ಬಹುತೇಕ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದೇರೀತಿ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಶಿವಾಜಿನಗರ, ಕಲಾಸಿಪಾಳ್ಯ ಸೇರಿ ಅನೇಕ ಕಡೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.







