ಉದ್ರಿಕ್ತರು ಪೊಲೀಸರ ಹತ್ಯೆಗೆ ಮುಂದಾಗಿದ್ದರು: ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಮಂಗಳೂರು, ಡಿ..19: ಉದ್ರಿಕ್ತ ಗುಂಪು ದಾಳಿಗೆ ಮುಂದಾದಾಗ ಯಾವುದೇ ಆಯ್ಕೆ ಇಲ್ಲದೇ ನಾವು ಬಲಪ್ರಯೋಗ ಮಾಡಿದ್ದೇವೆ. ಪೊಲೀಸ್ ಠಾಣೆಗೆ ದಾಳಿ ಹಾಗೂ ಪೊಲೀಸರ ಹತ್ಯಾ ಯತ್ನ ನಡೆಸಿದ ಹಿನ್ನೆಲೆಯಲ್ಲಿ ನಾವು ಪ್ರತಿರೋಧ ತೋರಿದ್ದೇವೆ. ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾರಣ ಅನಿವಾರ್ಯವಾಗಿ ಅಧಿಕಾರಿಗಳು ಬಲಪ್ರಯೋಗ ಮಾಡಿದ್ದಾರೆ. ಘಟನೆಯಿಂದ ಹಲವಾರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಕರೆ ನೀಡಿದರು. ಘಟನೆಯಿಂದ ಇಬ್ಬರು ನಾಗರಿಕರಿಗೆ ತೀವ್ರ ಗಾಯಗಳಾಗಿದ್ದು, ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14-15 ಮಂದಿ ಪೊಲೀಸರಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿವೆ. ಮೊದಲು ಪ್ರತಿಭಟನಾ ನಿರತರನ್ನು ಚದುರಿಸಿದ್ದೇವೆ. ಪರಿಸ್ಥಿತಿ ಕೈಮೀರಿ ಹೋದಾಗ ಆಶ್ರುವಾಯು ಸಿಡಿಸಿದ್ದೇವೆ. ಉದ್ರಿಕ್ತ ಗುಂಪು ಕಲ್ಲು ಹಾಗೂ ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದಾಗ ನಾವು ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಅವರು ಹೇಳಿದ್ದಾರೆ.





