ಗೋವಾ: ಸಂಗೀತ ಕಾರ್ಯಕ್ರಮದಲ್ಲಿ ಹಿಂದೂ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪ: ನಾಲ್ವರ ಬಂಧನ

ಪಣಜಿ,ಡಿ19: ತಮ್ಮ ಕಾರ್ಯಕ್ರಮದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದಲ್ಲಿ ‘ದಾಸ್ತಾನ್’ ಸಂಗೀತ ವೃಂದದ ನಾಲ್ವರು ಸದಸ್ಯರನ್ನು ಬಂಧಿಸಿದ ಗೋವಾ ಪೊಲೀಸರು ಬಳಿಕ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಸೆರೆಂಡಿಪಿಟಿ ಆರ್ಟ್ಸ್ ಫೆಸ್ಟಿವಲ್ ನಲ್ಲಿ ಹಾಡುಗಳನ್ನು ಹಾಡಿದ್ದ ಸುಮಂತ ಬಾಲಕೃಷ್ಣನ್, ಅನಿರ್ಬಾನ ಘೋಷ್,ಶಿವ ಪಾಠಕ್ ಮತ್ತು ನಿರ್ಮಲಾ ರವೀಂದ್ರನ್ ಅವರ ವಿರುದ್ದ ವಕೀಲ ವೆಂಕಟಕೃಷ್ಣ ಕುಂದುರು ಅವರು ದೂರನ್ನು ದಾಖಲಿಸಿದ್ದರು. ತಮ್ಮ ಹಾಡುಗಳಲ್ಲಿ ‘ಓಂ’ ಪಠಣದೊಂದಿಗೆ ನಿಂದಾತ್ಮಕ ಭಾಷೆಯನ್ನು ಬೆರೆಸಿ ಹಿಂದು ಧರ್ಮವನ್ನು ಅವಮಾನಿಸಿದ್ದಾರೆ ಎಂದು ಕುಂದುರು ಆರೋಪಿಸಿದ್ದರು. ಬುಧವಾರ ಈ ಬಂಧನಗಳು ನಡೆದಿದ್ದು,ಬಳಿಕ ತಲಾ 20,000 ರೂ.ಗಳ ಜಾಮೀನು ಬಾಂಡ್‌ಗಳ ಆಧಾರದಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಕಾರ್ಯಕ್ರಮದ ಫೂಟೇಜ್‌ಗಳನ್ನು ಒದಗಿಸುವಂತೆ ಸಂಘಟಕರಿಗೆ ಸೂಚಿಸಲಾಗಿದ್ದು,ಅದರ ಆಧಾರದಲ್ಲಿ ತನಿಖೆಯನ್ನು ನಡೆಸಲಾಗುವುದು ಎಂದು ತನಿಖಾಧಿಕಾರಿ ಸುಭಾಷ್ ಗಾಂವಕರ್ ಹೇಳಿರುವುದನ್ನು ಮಾಧ್ಯಮ ವರದಿಯು ಉಲ್ಲೇಖಿಸಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಹಾಡುಗಳನ್ನೇ ಕಾರ್ಯಕ್ರಮದಲ್ಲಿ ಹಾಡಲಾಗಿತ್ತು ಎಂದು ಆರ್ಟ್ಸ್ ಫೆಸ್ಟಿವಲ್‌ನ ಸಂಘಟಕರು ಹೇಳಿದ್ದಾರೆ.





