ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಇನ್ನಿಲ್ಲ

ಬೆಂಗಳೂರು, ಡಿ.19: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಖ್ಯಾತಿಯ ಚಂದ್ರಕಾಂತ ಕರದಳ್ಳಿ(67) ನಿಧನ ಹೊಂದಿದ್ದಾರೆ.
ಗುರುವಾರ ಬೆಳಗ್ಗೆ 9:30 ರ ಸುಮಾರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ, ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಾಯಿಸಿದರೂ, ಹಠಾತ್ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಆಗಲಿದ್ದು, ಅವರ ಪಾರ್ಥಿವ ಶರೀರವನ್ನು ಶುಕ್ರವಾರ ಯಾದಗಿರಿಯ ಶಹಪುರ ನಗರಕ್ಕೆ ತರಲಾಗುತ್ತದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಅವರು, ಯಾದಗಿರಿಯ ಚಂದ್ರಯ್ಯಸ್ವಾಮಿ ಕರದಳ್ಳಿ ಹಾಗೂ ಮುರಿಯಮ್ಮ ಎಂಬುವವರ ಪುತ್ರನಾಗಿ ಶಹಪುರ ನಗರದಲ್ಲಿ 1952ರ ಆಗಸ್ಟ್ 25 ರಂದು ಚಂದ್ರಕಾಂತ ಕರದಳ್ಳಿ ಜನಿಸಿದ್ದರು.
ಕರದಳ್ಳಿ ಅವರು ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಯಾದಗಿರಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಬಯಲು ಸೀಮೆಯಿಂದ ಕರಾವಳಿ, ಮಾಯದ ಗಂಟೆ, ಸೋಲೆ ಇಲ್ಲ ಗೆಲುವೇ ಎಲ್ಲಾ, ಗಿರಿ ಸಿರಿ, ಮನದ ಮಾತು ಹಾಗೂ ಕರದಳ್ಳಿ ಕಾವ್ಯ ಕತೆ, ಕಾದಂಬರಿ, ಶಿಶುಪ್ರಾಸ, ಒಗಟು, ಪ್ರವಾಸ ಕಥನ ಸೇರಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಚಂದ್ರಕಾಂತ ಕರದಳ್ಳಿ ಅವರ ಕಾಡ ಕನಸಿನ ಬೀಡಿಗೆ ಎಂಬ ಕಾದಂಬರಿಗೆ 2019 ರ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕರದಳ್ಳಿ ಅವರು, ಈ ಹಿಂದೆ ಶಹಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.







