ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು: ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ
ಸಿಡ್ನಿ (ಆಸ್ಟ್ರೇಲಿಯ), ಡಿ. 19: ಆಸ್ಟ್ರೇಲಿಯದಲ್ಲಿ ದಾಖಲೆ ಮಟ್ಟದ ಉಷ್ಣತೆಯಿಂದಾಗಿ ಅಭೂತಪೂರ್ವ ಪ್ರಮಾಣದಲ್ಲಿ ಕಾಡ್ಗಿಚ್ಚುಗಳು ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ ಅಧಿಕಾರಿಗಳು ಗುರುವಾರ ಏಳು ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ರಾಜ್ಯದಲ್ಲಿ ವಾರಗಳಿಂದ ಸುಮಾರು 100 ಕಡೆಗಳಲ್ಲಿ ಕಾಡ್ಗಿಚ್ಚುಗಳು ಉರಿಯುತ್ತಿದ್ದು, ಅವುಗಳ ಪೈಕಿ ಅರ್ಧದಷ್ಟು ಬೆಂಕಿಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ಅನಾಹುತಕಾರಿ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಗ್ಲಾಡಿಸ್ ಬೆರೆಜಿಕ್ಲಿಯನ್ ಹೇಳಿದರು. ಇದು ಸೆಪ್ಟಂಬರ್‌ನಲ್ಲಿ ಬರ ಪರಿಸ್ಥಿತಿಯಿಂದಾಗಿ ಆರಂಭಗೊಂಡ ಕಾಡ್ಗಿಚ್ಚು ಋತುವಿನಲ್ಲಿ, ಈ ರಾಜ್ಯದಲ್ಲಿ ಘೋಷಿಸಲಾದ ಎರಡನೇ ತುರ್ತು ಪರಿಸ್ಥಿತಿಯಾಗಿದೆ.
ದಾಖಲೆಯ 42 ಡಿಗ್ರಿ ಸೆಲ್ಸಿಯಸ್‌ಗೆ ಏರಿದ ಉಷ್ಣತೆ
ಆಸ್ಟ್ರೇಲಿಯದಲ್ಲಿ ಎರಡು ದಿನಗಳಿಂದ ದಾಖಲೆಯ ಗರಿಷ್ಠ ಉಷ್ಣತೆ ದಾಖಲಾಗಿದೆ. ಮಂಗಳವಾರ 40.9 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಸರಾಸರಿ ರಾಷ್ಟ್ರವ್ಯಾಪಿ ಉಷ್ಣತೆ ಗುರುವಾರ 42 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದು ಹಿಂದಿನ ಗರಿಷ್ಠ ಉಷ್ಣತೆಗಿಂತ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.
ಇದಕ್ಕೂ ಮೊದಲು 2013 ಜನವರಿಯಲ್ಲಿ ದಾಖಲಾಗಿದ್ದ 40.3 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲೆಯಾಗಿತ್ತು.







