ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನತೆಗೆ ತಪ್ಪು ಸಂದೇಶ: ಸಚಿವ ಶ್ರೀನಿವಾಸ ಪೂಜಾರಿ

ಧಾರವಾಡ, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆಯು ಸಂಸತ್‌ನಲ್ಲಿ ಬಹುಮತದಲ್ಲಿ ಅಂಗೀಕಾರವಾಗಿದೆ. ಅಧಿಕಾರ ಕಳೆದುಕೊಂಡ ಕೆಲವರು ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆಂದು ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬೆಂಕಿ ಬೀಳುತ್ತೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಸಮೃದ್ಧವಾಗಿ ಜಲವಿದೆ. ನದಿಗಳೆಲ್ಲಾ ಭರ್ತಿಯಾಗಿವೆ. ಅವರು ಹಾಕುವ ಬೆಂಕಿಗೆ ನೀರು ಹಾಕುವ ಸಾಮರ್ಥ್ಯವಿದೆ ಎಂದು ತಿರುಗೇಟು ನೀಡಿದ್ದಾರೆ.
ಹಿಂದಿನ ಸರಕಾರ ಮಠಗಳಿಗೆ ನೀಡಿದ ಅನುದಾನ ದೇವಸ್ಥಾನಗಳಿಗೆ ವರ್ಗಾಯಿಸುವ ವಿಚಾರವಾಗಿ ಮಾತನಾಡಿ, 60 ಕೋಟಿ ರೂ.ಹಣವನ್ನು ಮಠಗಳಿಗೆ ನೀಡುವ ಪ್ರಸ್ತಾಪ ಇದೆ. ನಮ್ಮ ಸರಕಾರ ಯಾವುದೇ ಮಠಗಳನ್ನು ನಿರ್ಲಕ್ಷ ಮಾಡುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಮಠಗಳಿಗೆ ನೀಡುವ ಹಣವನ್ನು ಯಾವ ದೇವಸ್ಥಾನಕ್ಕೂ ನೀಡುತ್ತಿಲ್ಲ. ಹಣಕಾಸಿನ ಹೊಂದಾಣಿಕೆ ವಿಷಯದಲ್ಲಿ ಮಾತ್ರ ಸ್ವಲ್ಪತಡವಾಗಿದೆ. ಪರಿಶೀಲನೆ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸಿದರು.





