ಪ್ರತಿಭಟನಾನಿರತರ, ಸಾರ್ವಜನಿಕರ ಮೇಲೆ ಪೋಲಿಸರಿಂದ ದೌರ್ಜನ್ಯ ಆರೋಪ: ಎಸ್ ಡಿಪಿಐ ಖಂಡನೆ
ಮಂಗಳೂರು: ಎನ್ ಎರ್ ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಪ್ರತಿಭಟನೆ ನಡೆಸಲು ಬಂದಂತಹ ಪ್ರತಿಭಟನಾಕಾರರ ಮತ್ತು ಬಸ್ಸಿಗಾಗಿ ಕಾಯುತ್ತಿದ್ದ, ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ನಿಂತಿದ್ದ ವಿದ್ಯಾರ್ಥಿಗಳ, ಮಹಿಳೆಯರ ಸಾರ್ವಜನಿಕರ ಹಾಗೂ ಪತ್ರಕರ್ತರ ಮೇಲೆ ಪೋಲಿಸರು ಏಕಾಏಕಿ ಯಾಗಿ ಲಾಠಿ ಚಾರ್ಜ್ ಮಾಡಿ ಗೋಲಿಬಾರ್ ನಡೆಸಿ ಎರಡು ಜೀವವನ್ನು ಬಲಿ ತೆಗೆದು ಹಲವು ಮಂದಿಯನ್ನು ಗಾಯಗೊಳಿಸಿದ ಕೃತ್ಯವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.
ಈ ದೇಶದ ಸಂವಿಧಾನ ನಮಗೆ ಕೊಟ್ಟಂತಹ ಹಕ್ಕಾಗಿರುತ್ತದೆ ನ್ಯಾಯಕ್ಕಾಗಿ ಹೋರಾಟ ನಡೆಸುವುದು. ಆದರೆ ಮಂಗಳೂರಿನ ಪೊಲೀಸರು ಸಂವಿಧಾನಾತ್ಮಕ ಹಕ್ಕನ್ನು ಕಸಿಯುವ ಮೂಲಕ ಅಸಂಬದ್ಧ ನಿಷೇಧಾಜ್ಞೆ ಜಾರಿಗೊಳಿಸಿ ಜನರನ್ನು ಆಕ್ರೋಶಿತರನ್ನಾಗಿ ಮಾಡಿ ಆ ಮೂಲಕ ನ್ಯಾಯಬದ್ಧವಾಗಿ ಶಾಂತಿಯುತವಾಗಿ ಹೋರಾಟ ಮಾಡಿದಂತಹ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು ಅಮಾನವೀಯ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಮಂಗಳೂರಿನಲ್ಲಿ ನಡೆದಂತಹ ಎಲ್ಲಾ ಘಟನೆಗಳಿಗೆ ಪೊಲೀಸ್ ಕಮಿಷನರ್ ರವರ ಬೇಜವಾಬ್ದಾರಿತನವೇ ಕಾರಣ. ಯಾವುದೇ ಘೋಷಣೆ ಮಾಡದೆ ಏಕಾಏಕಿ ಲಾಠಿಚಾರ್ಜ್ ಮತ್ತು ಗೋಲಿಬಾರ್ ಮಾಡಲು ಅಧಿಕಾರ ಕೊಟ್ಟವರು ಯಾರು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಬೇಕು. ಮುಖ್ಯಮಂತ್ರಿಯವರು ಪ್ರತಿಭಟನಕಾರರ ಮೆಲೆ ಲಾಠಿ ಚಾರ್ಜ್ ನಡೆಸಬಾರದು ಎಂದು ಮೌಖಿಕವಾಗಿ ಹೇಳಿಕೆ ನೀಡಿದ್ದರೂ ಕೂಡ ಪ್ರತಿಭಟನಕಾರರ ಮೇಲೆ ಪೊಲೀಸರೇ ಕಲ್ಲೆಸೆಯುವ ವಿಡಿಯೋ ವೈರಲ್ ಆಗುತ್ತಿದ್ದು ಸಂಘಪರಿವಾರದವರಂತೆ ವರ್ತಿಸಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಈ ಎಲ್ಲಾ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಎಸ್ ಡಿಪಿಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ತಿಳಿಸಿದ್ದಾರೆ.







