ಗಲ್ಲಿಗೇರಲು ಸಿದ್ಧನಿದ್ದೇನೆಯೇ ಹೊರತು, ಸಿಎಎ ರಾಜ್ಯದಲ್ಲಿ ಜಾರಿಗೆ ಬಿಡಲ್ಲ: ಯು.ಟಿ.ಖಾದರ್

ಕೊಪ್ಪಳ, ಡಿ.19: ಪೌರತ್ವ ಕಾಯ್ದೆ ವಿರುದ್ಧದ ಹೋರಾಟದಲ್ಲಿ ತಾನು ಗಲ್ಲಿಗೇರಲು ಸಿದ್ಧನಿದ್ದೇನೆಯೇ ಹೊರತು, ಅದನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಬಿಡುವುದಿಲ್ಲವೆಂದು ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರ ಸರಕಾರ ತಮ್ಮ ವೈಫಲ್ಯಗಳನ್ನು ಮರೆಮಾಚಲು ಅಸಂವಿಧಾನಿಕ ಕಾನೂನು ಜಾರಿಗೆ ತಂದಿದೆ. ಕೇಂದ್ರದ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಜನತೆ ಸ್ವಯಂಪ್ರೇರಿತರಾಗಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯವೆಂದರು.
ಬಿಜೆಪಿ ಸರಕಾರ ಜನರ ಭಾವನೆ ಮತ್ತು ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಜಾತಿ, ಧರ್ಮದ ಹೆಸರಿನಲ್ಲಿ ಕೇಂದ್ರ ಸರಕಾರ ಕಾಯ್ದೆ ರೂಪಿಸುತ್ತಿದೆ. ದೇಶದ ಜನರನ್ನು ವೈರಿಗಳಂತೆ ಕಾಣುತ್ತಿದೆ. ಈ ವಿಚಾರವನ್ನು ತಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.
ಪಾಕಿಸ್ತಾನದತ್ತ ಬೆರಳು ಮಾಡಿ ತೋರಿಸಿ ಮತ ಪಡೆಯುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಪಾಕಿಸ್ತಾನಕ್ಕೆ ಹೋಗಿ ಬರುವುದು, ಬಸ್ ಸಂಪರ್ಕ ಆರಂಭಿಸುವುದು ಇತ್ಯಾದಿ ನೋಡಿದರೆ ಬಿಜೆಪಿಯವರಿಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬುದು ಗೊತ್ತಾಗುತ್ತದೆ. ಪಾಕಿಸ್ತಾನದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕರ್ನಾಟಕದಲ್ಲಿ ಜಾರಿಯಾದರೆ ತೀವ್ರ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದ್ದೆ. ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ಎಲ್ಲೂ ಹೇಳಿಲ್ಲ. ಆದರೆ, ಬಿಜೆಪಿ ನಾಯಕರು ನನ್ನ ಹೇಳಿಕೆಯಲ್ಲಿ ತಪ್ಪಾಗಿ ಅರ್ಥೈಸಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ.
-ಯು.ಟಿ.ಖಾದರ್, ಮಾಜಿ ಸಚಿವ







