ಮಂಗಳೂರಿನಲ್ಲಿ ಗೋಲಿಬಾರ್ ಗೆ ಬಲಿಯಾದ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ನೀಡಿ: ಎಐಎಂಡಿಸಿ
ಮಂಗಳೂರು : ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಿಷೇಧಿಸುವ ಸಲುವಾಗಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಯುವಕರು ಬಲಿಯಾಗಿರುವುದು ಅತ್ಯಂತ ದುರದೃಷ್ಟಕರ. ಗೋಲಿಬಾರ್ ನಡೆಸುವ ಸನ್ನಿವೇಶ ಇಲ್ಲದಿದ್ದರೂ ಪೊಲೀಸರು ಗೋಲಿಬಾರ್ ನಡೆಸಿರುವುದು ಖಂಡನೀಯ. ಬಲಿಯಾದ ಜಲೀಲ್ ಕಂದಕ್ ಮತ್ತು ನೌಶೀನ್ ಕುದ್ರೋಳಿ ಕುಟುಂಬದವರಿಗೆ ತಲಾ ಒಂದು ಕೋಟಿ ರೂ. ಪರಿಹಾರ ಹಾಗೂ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ಗಾಯಾಳುಗಳಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ಸರಕಾರ ತಕ್ಷಣ ಬಿಡುಗಡೆ ಮಾಡುವಂತೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ಒತ್ತಾಯಿಸಿದೆ.
ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪೋಲಿಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ಇದರ ನಾಯಕರಾದ ಮೌಲಾನಾ ಮಹ್ಮೂದ್ ಮದನಿ, ಕೆ. ರಹ್ಮಾನ್ ಖಾನ್, ಮೌಲಾನ ಸೈಯದ್ ಮುಹಮ್ಮದ್ ತನ್ವೀರ್ ಹಾಶ್ಮಿ, ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್, ಮೌಲಾನ ಶಬ್ಬೀರ್ ಅಹ್ಮದ್ ಹುಸೈನ್ ನದ್ವಿ ಹಾಗೂ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.