ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ : ಹೊಸ ವೀಡಿಯೊದಲ್ಲಿ ಬಹಿರಂಗ
ನಿರಾಕರಿಸಿದ ಪೊಲೀಸರು
ಹೊಸದಿಲ್ಲಿ, ಡಿ. 19: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ರವಿವಾರ ನಡೆದ ಘರ್ಷಣೆ ಸಂದರ್ಭ ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪಿಸ್ತೂಲ್ ಬಳಿಸಿರುವುದನ್ನು ಹೊಸ ವೀಡಿಯೊ ಒಂದು ಬಹಿರಂಗಪಡಿಸಿದೆ. ಈ ವೀಡಿಯೊ ತುಣುಕಿನ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ದಿಲ್ಲಿ ಪೊಲೀಸರು ಬುಧವಾರ ಹೇಳಿದ್ದಾರೆ.
ಪ್ರತಿಭಟನಕಾರರನ್ನು ನಿಯಂತ್ರಿಸುವಾಗ ನಾವು ಗುಂಡು ಹಾರಿಸಿಲ್ಲ ಹಾಗೂ ಪೊಲೀಸರ ಕೈಯಲ್ಲಿ ಪಿಸ್ತೂಲು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೊದ ಅಧಿಕೃತತೆ ಇದುವರೆಗೆ ಪರಿಶೀಲಿಸಿಲ್ಲ. ಯುಟ್ಯೂಬ್ ಖಾತೆಯೊಂದರಲ್ಲಿ ಇದನ್ನು ಅಪ್ಲೋಡ್ ಮಾಡಲಾಗಿತ್ತು. ಸ್ಥಳವನ್ನು ಮಥುರಾ ರಸ್ತೆಯಲ್ಲಿರುವ ನ್ಯೂಫ್ರೆಂಡ್ಸ್ ಕಾಲನಿ ಎಂದು ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಬುಧವಾರ ಸಂಜೆ ಟಿ.ವಿ. ವಾಹಿನಿಯೊಂದರಲ್ಲಿ ಈ ವೀಡಿಯೊ ಪ್ರಸಾರವಾದ ಬಳಿಕ ಬಳಕೆದಾರ ಈ ವೀಡಿಯೊ ತೆಗೆದಿದ್ದಾರೆ. ವೀಡಿಯೊದ ಸ್ಥಳ ಹಾಗೂ ಸಮಯದ ಅಧಿಕೃತತೆಯನ್ನು ಇದುವರೆಗೆ ದೃಢಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೀಡಿಯೊದಲ್ಲಿ ಓರ್ವ ಪೊಲೀಸ್ ಪಿಸ್ತೂಲ್ ಎಂದು ಹೇಳಲಾಗುವ ವಸ್ತುವನ್ನು ಆತುರವಾಗಿ ತರುತ್ತಿರುವುದು ಹಾಗೂ ಮೂವರು ಪೊಲೀಸರಲ್ಲಿ ಇಬ್ಬರು ಪಿಸ್ತೂಲ್ ಅನ್ನು ಸಿದ್ದಗೊಳಿಸುವುದು ಕಂಡು ಬಂದಿದೆ. ಪೊಲೀಸನೊಬ್ಬ ಪಿಸ್ತೂಲ್ ಹಿಡಿದ ಕೈ ಎತ್ತಿರುವುದು ಹಾಗೂ ಗುಂಪಿನತ್ತ ಗುರಿಯಿರಿಸುವುದು ವೀಡಿಯೊದಲ್ಲಿ ಕಂಡು ಬಂದಿದೆ. ಕೂಡಲೇ ಗುಂಡಿನ ಸದ್ದು ಕೇಳಿ ಬಂದಿದೆ. ಆದರೆ, ಇದು ಅದೇ ಪಿಸ್ತೂಲ್ನಿಂದ ಹೊರಟ ಶಬ್ದವೇ ಅಥವಾ ವೀಡಿಯೊಗೆ ಶಬ್ದ ಸೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.