ಉತ್ತರಪ್ರದೇಶ: ಅತ್ಯಾಚಾರ, ದಹನಕ್ಕೆ ಒಳಗಾದ ಯುವತಿ ಸಾವು
ಕಾನ್ಪುರ, ಡಿ. 20: ಉತ್ತರಪ್ರದೇಶದ ಫತೇಪುರ ಜಿಲ್ಲೆಯ ಗ್ರಾಮವೊಂದರಲ್ಲಿ 4 ದಿನಗಳ ಹಿಂದೆ ಅತ್ಯಾಚಾರ ಹಾಗೂ ದಹನಕ್ಕೆ ಒಳಗಾದ 20 ವರ್ಷದ ಯುವತಿ ಕಾನ್ಪುರದ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಸಂತ್ರಸ್ತೆ ಕಳೆದ ಮೂರು ದಿನಗಳಿಂದ ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್ನಲ್ಲಿ ಕೋಮಾದಲ್ಲಿ ಇದ್ದರು. ‘‘ಅವರು ಬೆಳಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ’’ ಎಂದು ಎಲ್ಎಲ್ಆರ್ ಆಸ್ಪತ್ರೆಯ ಉಸ್ತುವಾರಿ ಆರ್.ಕೆ. ಮೌರ್ಯ ಹೇಳಿದ್ದಾರೆ.
ಡಿಸೆಂಬರ್ 14ರಂದು ಅತ್ಯಾಚಾರಕ್ಕೆ ಒಳಗಾದ ಯುವತಿ ತಾನು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವುದಾಗಿ ಹೇಳಿದ್ದಳು. ಇದರಿಂದ ಆಕ್ರೋಶಿತನಾದ ಅತ್ಯಾಚಾರಿ ಆಕೆಗೆ ಬೆಂಕಿ ಹಚ್ಚಿದ್ದ. ಯುವತಿಯ ಸಹೋದರ ಫತೇಪುರದ ಹುಸೈನ್ಗಂಜ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಹತ್ಯೆ ಯತ್ನದ ಪ್ರಕರಣ ದಾಖಲಿಸಿದ್ದರು. ಪೊಲೀಸರು ಡಿಸೆಂಬರ್ 15ರಂದು ಆರೋಪಿಯನ್ನು ಆತನ ಸಂಬಂಧಿಕರ ಮನೆಯಿಂದ ಬಂಧಿಸಿದ್ದರು.