ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ : ಚೆನ್ನೈನಲ್ಲಿ ನಟ ಸಿದ್ಧಾರ್ಥ್ ಸಹಿತ 600 ಮಂದಿ ವಿರುದ್ಧ ಕೇಸ್
ಚೆನ್ನೈ : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೆದರಿಕೆ ಬಂದಿರುವ ಕುರಿತಂತೆ ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ ಮರುದಿನ ಚೆನ್ನೈನಲ್ಲಿ ಕಾಯ್ದೆ ಹಾಗೂ ಎನ್‍ಆರ್ ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಚೆನ್ನೈ ಪೊಲೀಸರು ಸಿದ್ಧಾರ್ಥ್ ಸಹಿತ 600 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚೆನ್ನೈನ ವಲ್ಲುವರ್ ಕೊಟ್ಟಂ ಎಂಬಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ. ಎಫ್‍ಐಆರ್ ನಲ್ಲಿ ಸಿದ್ಧಾರ್ಥ್ ಹೊರತಾಗಿ ಗಾಯಕ ಟಿ ಎಂ ಕೃಷ್ಣ ಹಾಗೂ ರಾಜಕಾರಣಿ ತಿರುಮವಲವನ್ ಅವರ ಹೆಸರುಗಳೂ ಇವೆ.
ಚೆನ್ನೈ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವ ಹೊರತಾಗಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುವ ಹಲವು ಹ್ಯಾಂಡಲ್‍ಗಳಿಂದ ತಮಗೆ ಬೆದರಿಕೆಗಳು ಬಂದಿವೆ ಎಂದು ನಟ ಸಿದ್ಧಾರ್ಥ್ ಈ ಹಿಂದೆ ಹೇಳಿಕೊಂಡಿದ್ದರು.