ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್‌ಗೆ ಜೀವಿತಾವಧಿ ಶಿಕ್ಷೆ

ಹೊಸದಿಲ್ಲಿ, ಡಿ.20: ಉತ್ತರಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ಶುಕ್ರವಾರ ದಿಲ್ಲಿ ನ್ಯಾಯಾಲಯ ಜೀವನಪೂರ್ತಿ ಜೈಲಿನಲ್ಲಿ ಕಳೆಯುವ ಶಿಕ್ಷೆ ನೀಡಿ ಆದೇಶಿಸಿದೆ.
ನ್ಯಾಯಾಲಯದ ಈ ಆದೇಶದಿಂದಾಗಿ ನಾಲ್ಕು ಬಾರಿ ಬಿಜೆಪಿ ಪಕ್ಷದಿಂದ ಚುನಾಯಿತನಾಗಿದ್ದ ಸೆಂಗಾರ್ ಜೀವನಪರ್ಯಂತ ಜೈಲಿನಲ್ಲಿ ಕಳೆಯಬೇಕಾಗಿದೆ.
ಶಿಕ್ಷೆಯನ್ನು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶರಾದ ಧರ್ಮೇಶ್ ಶರ್ಮಾ ಅವರು ಸೆಂಗಾರ್‌ಗೆ ಪ್ರಕರಣಕ್ಕೆ ಸಂಬಂಧಿಸಿ 25 ಲಕ್ಷ ರೂ. ದಂಡ ವಿಧಿಸಿದ್ದು, ಅತ್ಯಾಚಾರ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಹಾಗೂ ಪೊಸ್ಕೋ ಕಾಯ್ದೆ ಅಡಿ ಅತ್ಯಾಚಾರ ಆರೋಪಿ ಸೆಂಗಾರ್ ತಪ್ಪಿತಸ್ಥ ಎಂದು ಸೋಮವಾರ ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.
ಅಪ್ರಾಪ್ತೆಯನ್ನು ಸೆಂಗಾರ್ ಬಳಿ ಕರೆದೊಯ್ದಿದ್ದ ಸಹ ಆರೋಪಿ ಶಶಿ ಸಿಂಗ್ ‘ಸಂಶಯದ ಲಾಭ’ಪಡೆದು ದೋಷಮುಕ್ತನಾಗಿದ್ದಾನೆ.
ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಲಕ್ನೋ ನ್ಯಾಯಾಲಯದಿಂದ ದಿಲ್ಲಿಗೆ ವರ್ಗಾವಣೆಯಾಗಿದ್ದ ಈ ಪ್ರಕರಣವು ದಿಲ್ಲಿಯ ತೀಸ್ ಹಝಾರಿ ನ್ಯಾಯಾಲಯದಲ್ಲಿ ದೈನಂದಿನ ವಿಚಾರಣೆ ನಡೆಸಲಾಗಿತ್ತು.







