ಬಂಟ್ವಾಳ : ರಸ್ತೆ ಅಪಘಾತದ ಗಾಯಾಳು ಯುವಕ ಮೃತ್ಯು

ಬಂಟ್ವಾಳ, ಡಿ. 20: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.
ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ದಿ. ಹಸನಬ್ಬ ಎಂಬವರ ಪುತ್ರ ಸಿರಾಜ್ (25) ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳಿದಿದ್ದಾರೆ.
ಘಟನೆ: ಕಳೆದ ಮಂಗಳವಾರ ಸಮಸ್ತ ಸಮ್ಮೇಳನಕ್ಕೆಂದು ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿಗಳಾದ ಝುಬೈರ್, ಶರೀಫ್, ಸಿರಾಜ್, ವಳವೂರಿನ ಅರಬನಗುಡ್ಡೆಯ ನಿವಾಸಿಗಳಾದ ಮುಸ್ತಫಾ, ಆಸಿಫ್ ಕಾರೊಂದರಲ್ಲಿ ಮಡಿಕೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂದಿರುಗುವ ವೇಳೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಇಲ್ಲಿನ ಮೈಲುಗಲ್ಲುವೊಂದಕ್ಕೆ ಢಿಕ್ಕಿ ಹೊಡೆದು, ಉರುಳಿದೆ.
ಅಪಘಾತದ ತೀವ್ರತೆಗೆ ಸಿರಾಜ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಉಳಿದ ಪ್ರಯಾಣಿಕರಾದ ಝುಬೈರ್, ಸಿರಾಜ್, ಮುಸ್ತಫಾ, ಆಸಿಫ್ ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದರು.





