ಮಂಗಳೂರಿನಲ್ಲಿ ಪತ್ರಕರ್ತರ ಬಂಧನಕ್ಕೆ ಪಿಣರಾಯಿ ವಿಜಯನ್ ತೀವ್ರ ಖಂಡನೆ

ತಿರುವನಂತಪುರ,ಡಿ.20: ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಕೇರಳದ ಕೆಲವು ಪತ್ರಕರ್ತರನ್ನು ಪೊಲೀಸರು ಬಂಧಿಸಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತರನ್ನು ಬಂಧಿಸುವ ಮೂಲಕ ಕರ್ನಾಟಕ ಸರಕಾರವು ಮಾಧ್ಯಮಗಳ ಮೇಲೆ ಪ್ರಹಾರ ನಡೆಸಿದ್ದು, ಇದು ಅದರ ಫ್ಯಾಶಿಸ್ಟ್ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
‘‘ಪತ್ರಕರ್ತರನ್ನು ಗಲಭೆಕೋರರೆಂದು ಹಾಗೂ ಸುದ್ದಿಯನ್ನು ಸಂಗ್ರಹಿಸಲು ಅವರು ಬಳಸುವ ಉಪಕರಣಗಳನ್ನು ಮಾರಕಾಸ್ತ್ರಗಳೆಂದು ಬಿಂಬಿಸುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ .ಮಾಧ್ಯಮಗಳ ಮೇಲೆ ಪ್ರಹಾರಗೈಯುವುದು, ಫ್ಯಾಶಿಸ್ಟ್ ಮನಸ್ಥಿತಿಯಾಗಿದೆ. ಇದರ ವಿರುದ್ಧ ಪ್ರಬಲವಾದ ಜನಾಭಿಪ್ರಾಯ ರೂಪು ಗೊಳ್ಳಬೇಕಾಗಿದೆ’’ ಎಂದವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ವರದಿಗಾರಿಕೆಗಾಗಿ ಮಂಗಳೂರಿಗೆ ಪ್ರಯಾಣಿಸುವ ತನ್ನ ರಾಜ್ಯದ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಕೇರಳ ಸರಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಿ ಎಂದವರು ಹೇಳಿದ್ದಾರೆ.
ಇದಕ್ಕೂ ಮುನ್ನ ಕೇರಳ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹರಾ ಅವರು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ಬಂಧಿತ ಪತ್ರಕರ್ತರನ್ನು ಬಿಡುಗಡೆಗೊಳಿಸುವಂತೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ಕೋರಿರುವುದಾಗಿ ತಿಳಿಸಿದ್ದಾರೆ. ಬಂಧಿತ ಪತ್ರಕರ್ತರ ಹೆಸರುಗಳನ್ನು ಕೇರಳ ಪೊಲೀಸರು ಒದಗಿಸಿದ ಆನಂತರ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕದ ಡಿಜಿಪಿಯವರು ಭರವಸೆ ನೀಡಿದ್ದಾರಂದು ಬೆಹರಾ ಹೇಳಿದ್ದಾರೆ.
ಕೇರಳದ ಪತ್ರಕರ್ತರು ಮಾತ್ರವಲ್ಲದೆ, ಇತರ ರಾಜ್ಯಗಳ ಪತ್ರಕರ್ತರನ್ನು ಕೂಡಾ ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪತ್ರಕರ್ತರ ಗುರುತುಗಳನ್ನು ಅವರು ದೃಢಪಡಿಸಿಕೊಂಡ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಪೊಲೀಸ್ ಗೋಲಿಬಾರ್‌ಗೆ ಬಲಿಯಾದ ಇಬ್ಬರ ಮರಣೋತ್ತರ ಪರೀಕ್ಷೆಯು ವೆನ್‌ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದಾಗ ಅಲ್ಲಿದ್ದ ಕೆಲವು ಕೇರಳ ಮೂಲದ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಪತ್ರಕರ್ತರ ಮೊಬೈಲ್ ಹಾಗೂ ಕ್ಯಾಮೆರಾಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆಯೆಂದು ಆರೋಪಿಸಲಾಗಿದೆ.
ಕರ್ನಾಟಕ ಹಾಗೂ ಕೇರಳದ ಕೆಲವು ಸುದ್ದಿಮಾಧ್ಯಮಗಳು ಬಂಧಿತರು ನಕಲಿ ಪತ್ರಕರ್ತರೆಂದು ವರದಿ ಮಾಡಿರುವುದು ಕೇರಳದ ಮಾಧ್ಯಮವಲಯದಲ್ಲಿ ತೀರಾ ಅಸಮಾಧಾನಕ್ಕೆ ಕಾರಣವಾಗಿತ್ತು.
‘‘ಮಂಗಳೂರಿನಲ್ಲಿ ಬಂಧಿತರಾದ ಪತ್ರಕರ್ತರು ಕೇರಳದಲ್ಲಿ ಚಿರಪರಿಚಿತರಾದವರಾಗಿದ್ದಾರೆ. ಆದಾಗ್ಯೂ ಕರ್ನಾಟಕದ ಒಂದು ನಿರ್ದಿಷ್ಟ ಸುದ್ದಿವಾಹಿನಿಯು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆಯೆಂದು ವರದಿ ಮಾಡುತ್ತಿದೆ ’’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.







