ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ಬೆಂಗಳೂರಿನಲ್ಲಿ ನಿಷೇಧಾಜ್ಞೆ ನಡುವೆಯೂ ಬೀದಿಗಿಳಿದ ವಿದ್ಯಾರ್ಥಿಗಳು
►ಶಾಂತಿಯುತ ಪ್ರತಿಭಟನೆ ►ಕೇಂದ್ರ ಸರಕಾರದ ವಿರುದ್ಧ ಘೋಷಣೆ

ಬೆಂಗಳೂರು, ಡಿ.20: ನಿಷೇಧಾಜ್ಞೆಯ ನಡುವೆಯು ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕೆವಿಎಸ್, ಎಸ್‌ಎಫ್‌ಐ, ಎಸ್‌ಐಒ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ಕೇಂದ್ರ ಸರಕಾರ ಜಾರಿಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ. ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟವನ್ನು ನಿರಂತರವಾಗಿ ಮುನ್ನೆಡೆಸುವುದಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಭಾರತವನ್ನು ಹಿಂದೂ, ಮುಸ್ಲಿಮ್, ದಲಿತರು, ಬೌದ್ಧರು, ಸಿಖ್ಖರ್, ಆದಿವಾಸಿಗಳು ಸೇರಿದಂತೆ ಎಲ್ಲ ಸಮುದಾಯವನ್ನು ಕಟ್ಟಿದ್ದಾರೆ. ಕಷ್ಟು-ಸುಖ, ನೋವು, ನಲಿವುಗಳಲ್ಲಿ ಪರಸ್ಪರ ಭಾಗಗಳಾಗಿ ಅನ್ಯೋನ್ಯವಾಗಿ, ಸೌಹಾರ್ದತೆಯಿಂದ ಜೀವನ ನಡೆಸುತ್ತಾ ಬರುತ್ತಿದ್ದಾರೆ. ಇಂತಹ ಬಹುತ್ವ ಭಾರತ್ವವನ್ನು ಬಿಜೆಪಿ, ಆರೆಸ್ಸೆಸ್ ನಾಯಕರು ಒಡೆಯಲು ಮುಂದಾಗಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳಾದ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲವೆಂದು ಕೆವಿಎಸ್‌ನ ಸರೋವರ್ ಬೆಂಕಿಕೆರೆ ತಿಳಿಸಿದರು.
ದೇಶದ ಸ್ವಾತಂತ್ರ ಹೋರಾಟಕ್ಕಾಗಿ ಹಿಂದೂ-ಮುಸ್ಲಿಮ್ ಯುವಕರು ನಗು, ನಗುತ್ತಲೆ ನೇಣಿಗೇರಿದ್ದಾರೆ. ಅವರ ಆಶಯಗಳನ್ನು ದೇಶದ ಜನತೆ ಇಂದಿಗೂ ಸ್ಮರಿಸುತ್ತಲೇ ಜೊತೆಯಾಗಿ ಬಾಳ್ವೆ ನಡೆಸುತ್ತಾ ಬರುತ್ತಿದ್ದಾರೆ. ಇಂತಹ ಬಹುತ್ವ ಭಾರತವನ್ನು ನಿರ್ಣಾಮ ಮಾಡುವುದಕ್ಕಾಗಿಯೇ ಜನ್ಮ ತಾಳಿರುವ ಬಿಜೆಪಿ ಹಾಗೂ ಆರೆಸ್ಸೆಸ್ ದೇಶವನ್ನು ಧರ್ಮಾಧಾರಿತವಾಗಿ ಬೇರ್ಪಡಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಒಗ್ಗಟ್ಟನ್ನು ಸಹಿಸದ ಕೇಂದ್ರ ಸರಕಾರ ಪೊಲೀಸರ ಮೂಲಕ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವಂತಹ ಪ್ರಯತ್ನಕ್ಕೆ ಮುಂದಾಗಿದೆ. ಸರಕಾರದ ಇಂತಹ ಧಮನಕಾರಿ ಧೋರಣೆ ವಿರುದ್ಧ ವಿದ್ಯಾರ್ಥಿಗಳ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತೆರೇಸಾ, ಅನಿರುದ್, ಅಮೂಲ್ಯಾ, ವೈಷ್ಣವಿ ಸೇರಿದಂತೆ ಮೌಂಟ್ ಕಾರ್ಮೆಲ್, ದಯಾನಂದ ಸಾಗರ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.







