ಪೌರತ್ವ ಕಾಯ್ದೆ ವಿರುದ್ಧ ಶಿಕಾಗೊ, ಬೋಸ್ಟನ್‌ನಲ್ಲಿ ಪ್ರತಿಭಟನೆ

ವಾಶಿಂಗ್ಟನ್, ಡಿ. 20: ಭಾರತೀಯ ಅಮೆರಿಕನ್ನರು ಮತ್ತು ಭಾರತೀಯ ವಿದ್ಯಾರ್ಥಿಗಳು ಶಿಕಾಗೊ ಮತ್ತು ಬೋಸ್ಟನ್ ನಗರಗಳಲ್ಲಿ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದು ಭಾರತದ ಸಾಮಾಜಿಕ ಹಂದರವನ್ನು ಹಾಳುಗೆಡಹುವ ನಿಟ್ಟಿನಲ್ಲಿ ಇಡಲಾಗಿರುವ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಿಕಾಗೊದಲ್ಲಿ ಸುಮಾರು 150 ಮಂದಿ ಟ್ರಿಬ್ಯೂನ್ ಟವರ್‌ನಿಂದ ಭಾರತೀಯ ಕೌನ್ಸುಲೇಟ್‌ವರೆಗೆ ಮೆರವಣಿಗೆಯಲ್ಲಿ ಸಾಗಿದರು.
‘‘ಭಾರತ ಸರಕಾರದ ಈ ದುರುದ್ದೇಶಪೂರಿತ ವರ್ತನೆಯನ್ನು ಶಿಕಾಗೊ ಖಂಡಿಸುತ್ತದೆ’’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದಿಂದ ನಾವು ಆಕ್ರೋಶಿತರಾಗಿದ್ದೇವೆ ಹಾಗೂ ಅದನ್ನು ತೀವ್ರವಾಗಿ ಖಂಡಿಸಿದ್ದೇವೆ’’ ಎಂದು ಭಾರತೀಯ ವಿದ್ಯಾರ್ಥಿಗಳು ಶಿಕಾಗೊದಲ್ಲಿ ಹೇಳಿದರು.
ಐಎಎಂಸಿ ಖಂಡನೆ
ಜಾಮಿಯಾ ಮತ್ತು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯಗಳಲ್ಲಿ ಪೊಲೀಸರು ನಡೆಸಿರುವ ‘ಅಮಾನುಷ ದೌರ್ಜನ್ಯ’ಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (ಐಎಎಂಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಈ ದುರಂತಗಳು ಒಂದರ ನಂತರ ಒಂದು ಅನಾವರಣಗೊಳ್ಳುತ್ತಿರುವುದನ್ನು ನಾವು ಆಘಾತದಿಂದ ನೋಡಿದ್ದೇವೆ. ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ರಾಜಕಾರಣದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ಇದು ಭಾರತದ ಸಾಮಾಜಿಕ ಹಂದರವನ್ನು ಹಾಳುಗೆಡಹಲು ತೆಗೆದುಕೊಂಡ ನಿರ್ಧಾರವಾಗಿದೆ. ವಿದ್ಯಾರ್ಥಿಗಳು ಕನಿಷ್ಠ ಪ್ರತಿಭಟಿಸುವ ಪ್ರಜಾಸತ್ತಾತ್ಮಕ ಹಕ್ಕನ್ನಾದರೂ ಹೊಂದಬೇಕು’’ ಎಂದು ಐಎಎಮ್‌ಸಿ ಅಧ್ಯಕ್ಷ ಅಹ್ಸಾನ್ ಖಾನ್ ಹೇಳಿದ್ದಾರೆ.







