ಶೇಕಡ 99ರಷ್ಟು ಮುಸ್ಲಿಮರು ಮೂಲತಃ ಹಿಂದೂಗಳು: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಝೀಮ್

ಬೆಂಗಳೂರು, ಡಿ.20: ಭಾರತದ ಶೇಕಡ 99ರಷ್ಟು ಮುಸ್ಲಿಮರು ಹಿಂದೂಗಳಾಗಿದ್ದು, ಇವರೆಲ್ಲಾ ಇಲ್ಲೇ ಹುಟ್ಟಿದ್ದಾರೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದರು.
ಶುಕ್ರವಾರ ನಗರದ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಅಡ್ವಕೇಟ್ಸ್ ಫಾರ್ ನೇಶನ್ ಪ್ರೆಸೆಂಟ್ಸ್ ಆಯೋಜಿಸಿದ್ದ, ಪೌರತ್ವ ತಿದ್ದುಪಡಿ ಕಾಯ್ದೆ-2019 ಕುರಿತ ಸತ್ಯಾಂಶ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ಮುಸ್ಲಿಮರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ ಎಂದರು.
1947ನೇ ಸಾಲಿನಲ್ಲಿ ಮುಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದಾಗ ಬಹುತೇಕ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದರು. ಆತ ನೀಡಿದ, ಭರವಸೆಗಳಿಗೂ ಯಾರು ಸಹ ತಲೆಬಾಗಿಸಿಲ್ಲ. ಇಂದಿಗೂ ಸಹ ಈ ದೇಶಕ್ಕಾಗಿ ಮುಸ್ಲಿಮರು ಪ್ರಾಣ ತ್ಯಾಗ ಮಾಡುತ್ತಾರೆ. ರಾಷ್ಟ್ರಭಕ್ತಿಯೂ ಅವರಲ್ಲಿದೆ ಎಂದು ತಿಳಿಸಿದರು.
ಎನ್‌ಆರ್‌ಸಿ ಮತ್ತು ಸಿಎಎ ತಮ್ಮ ಪೌರತ್ವ ಸಾಬೀತುಪಡಿಸದ ಮುಸ್ಲಿಮರಿಗೆ ತಾತ್ಕಾಲಿಕ ವಶದಲ್ಲಿರಿಸಿಕೊಳ್ಳಲಾಗುವ ಕೇಂದ್ರದಲ್ಲಿ (ಡಿಟೆನ್ಶನ್ ಸೆಂಟರ್) ಇರಿಸಲಾಗುವುದು ಎನ್ನುವ ತಪ್ಪು ಸಂದೇಶಗಳು ಹರಿದಾಡುತ್ತಿವೆ. ಇದರ ಪರಿಣಾಮವೇ, ಕೆಲವರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದು ಭಾರತೀಯರಿಗೆ ಅನ್ವಯಿಸುವುದಿಲ್ಲ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದರು.
ಪೌರತ್ವ ಸಂಬಂಧ ಕೇಳುವ ದಾಖಲಾತಿಗಳನ್ನು ಭಾರತೀಯ ಮುಸ್ಲಿಮರು ಹೊಂದಿಸಬಹುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದ ಅವರು, ಅನೇಕರು ಸಿಎಎ ಬಗ್ಗೆ ಮಾಹಿತಿಯೇ ಹೊಂದಿಲ್ಲ. ಆದರೂ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಅಬ್ದುಲ್ ಅಝೀಮ್ ದೂರಿದರು.







