ನಿಷೇಧಾಜ್ಞೆ ಮೂಲಕ ಚಳವಳಿಯನ್ನು ಹತ್ತಿಕ್ಕಲು ಅಸಾಧ್ಯ: ನ್ಯಾ.ಗೋಪಾಲಗೌಡ

ಬೆಂಗಳೂರು, ಡಿ.20: ಆಳುವ ವರ್ಗ ನಿಷೇಧಾಜ್ಞೆ, ಕರ್ಫ್ಯೂಗಳ ಮೂಲಕ ಜನ ಚಳವಳಿಯನ್ನು ಹತ್ತಿಕ್ಕಲು ಅಸಾಧ್ಯ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಶಾಸಕರಭವನದ ಸಭಾಂಗಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ವತಿಯಿಂದ ಆಯೋಜಿಸಿದ್ದ ಪೌರತ್ವ(ತಿದ್ದುಪಡಿ) ಕಾಯ್ದೆ 2019 ರ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕಾಗಿದೆ. ಅದನ್ನು ನಿಷೇಧಾಜ್ಞೆ ಜಾರಿಗೊಳಿಸಿ, ಇಂಟರ್‌ನೆಟ್ ಕಡಿತ ಮಾಡಿ ಹತ್ತಿಕ್ಕಲು ಸಾಧ್ಯವಿಲ್ಲ. ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದಾಗಲೆಲ್ಲಾ, ಜನಾಂದೋಲನ ಹೆಚ್ಚಾಗಿರುವುದು ಇತಿಹಾಸದಿಂದ ನೋಡಬಹುದಾಗಿದೆ ಎಂದು ಅವರು ತಿಳಿಸಿದರು.
ಸಂವಿಧಾನದ 19 ನೆ ಕಲಂ ಜಾರಿಯಲ್ಲಿದೆಯೇ ಎಂಬ ಸಂಶಯ ಮೂಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಪ್ರತಿಭಟಿಸುವುದಲ್ಲಿ ತಪ್ಪು ಏನಿದೆ. ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವೇನಿತ್ತು. ದೇಶದಲ್ಲಿ ಸಂವಿಧಾನವಿದೆಯಾ, ಪ್ರಜಾಪ್ರಭುತ್ವ ಉಳಿದುಕೊಂಡಿದೆಯಾ ಎಂದು ಪ್ರಶ್ನಿಸಿದರು.
ಸರಕಾರ ಕೈಗೊಳ್ಳುವ ಕಾಯ್ದೆ, ನೀತಿಗಳ ಬಗ್ಗೆ ಮುಕ್ತ ಚರ್ಚೆ ನಡೆಯಬೇಕಿದೆ. ಎಲ್ಲರೂ ಅವರ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ಸಂವಿಧಾನದಲ್ಲಿ ನೀಡಲಾಗಿದೆ. ಆದರೆ, ಸರಕಾರ ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಹೇರಿಕೆ ಮಾಡುವ ಮೂಲಕ, ಚಳವಳಿಗಾರರನ್ನು ನಿಯಂತ್ರಿಸಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.
ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನ ಹಾಗೂ ಜಾತ್ಯತೀತ ತತ್ವಕ್ಕೆ ವಿರೋಧವಾಗಿದೆ. ಪ್ರಜಾಪ್ರಭುತ್ವದಲ್ಲಿ ಧರ್ಮಾಧಾರಿತ ನೀತಿಗಳನ್ನು ಒಪ್ಪುವುದಿಲ್ಲ. ಸಂವಿಧಾನಕ್ಕೆ ಹಲವು ತಿದ್ಧುಪಡಿಗಳು ಆಗಿದ್ದರೂ, ಎಲ್ಲರಿಗೂ ನೈಸರ್ಗಿಕವಾಗಿ ಹಕ್ಕುಗಳನ್ನು ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪೌರತ್ವ(ತಿದ್ದುಪಡಿ) ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಕ್ರೈಸ್ತರು, ಬೌದ್ಧರು, ಪಾರ್ಸಿ, ಜೈನರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಇಲ್ಲಿ ದೌರ್ಜನ್ಯಕ್ಕೊಳಗಾಗುವ ಮುಸ್ಲಿಮರನ್ನು ಹೊರಗಿಡಲಾಗಿದೆ. ಧರ್ಮದ ಆಧಾರದಲ್ಲಿ ರೂಪಿತವಾಗಿರುವ ಈ ಮಸೂದೆಯು ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಶ್ರೀಲಂಕಾದ ಲ್ಲಿ 80 ಲಕ್ಷ ಹಿಂದೂಗಳು ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಭೂತಾನ್, ಮಯನ್ಮಾರ್‌ನಲ್ಲೂ ಇದೆ ಪರಿಸ್ಥಿತಿ ಉಂಟಾಗಿದೆ. ಅವರನ್ನು ಏಕೆ, ಈ ಕಾಯ್ದೆಯಲ್ಲಿ ಸೇರಿಸಿಲ್ಲ ಎಂದು ಖಾರವಾಗಿ ಪ್ರಶ್ನೆ ಮಾಡಿದ ಅವರು, ದೇಶ ಗಂಡಾಂತರ ಪರಿಸ್ಥಿತಿ ಎದುರಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿಂತಕ ಮಹೇಂದ್ರ ಕುಮಾರ್ ಮಾತನಾಡಿ, ದೇಶದಲ್ಲಿ ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ಬೆಲೆ ಏರಿಕೆಯಂತಹ ಸಮಸ್ಯೆಗಳ ನಡುವೆ ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಎನ್‌ಆರ್‌ಸಿ ಮತ್ತು ಸಿಎಎ ತರಲು ಮುಂದಾಗಿದೆ. ಈ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಚಿಂತಕ ಜಿ.ಎನ್.ನಾಗರಾಜ್, ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್.ವಿಮಲಾ, ಸಿಪಿಎಂ ಮುಖಂಡ ಡಾ.ಕೆ.ಪ್ರಕಾಶ್, ಲೇಖಕಿ ಪಲ್ಲವಿ ಇಡೂರು, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್, ಕಾರ್ಯದರ್ಶಿ ಗುರುರಾಜ್ ದೇಸಾಯಿ ಸೇರಿದಂತೆ ಹಲವರಿದ್ದರು.
ದೇಶದಲ್ಲಿನ ಶೋಷಿತರು, ನಿರ್ಗತಿಕರು, ಭಿಕ್ಷುಕರು, ವೇಶ್ಯೆಯರು, ಬಡವರ ಬಳಿ ಯಾವುದೇ ದಾಖಲೆಗಳಿಲ್ಲ. ಶ್ರೀಮಂತರು, ಉಳ್ಳವರು ಹಾಗೂ ಮೇಲ್ಜಾತಿಗಳಷ್ಟೇ ದಾಖಲೆಯನ್ನು ಹೊಂದಿರುತ್ತಾರೆ. ಎನ್‌ಆರ್‌ಸಿ ಅಡಿಯಲ್ಲಿ ದಾಖಲೆ ನೀಡದವರನ್ನು ಅಕ್ರಮ ವಲಸಿಗರು ಎಂದು ಕರೆಯುತ್ತಾರೆ. ಆದರೆ, ಪೌರತ್ವ(ತಿದ್ಧುಪಡಿ) ಕಾಯ್ದೆ ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾ ಸೇರಿ ನೆರೆಯ ರಾಷ್ಟ್ರದ ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿಗಳಿಗೆ ನೀಡುವಂತೆಯೇ ಇಲ್ಲಿನ ದಾಖಲೆಗಳಿಲ್ಲದ ನಿವಾಸಿಗಳಿಗೆ ಪೌರತ್ವ ನೀಡಲಾಗುತ್ತದೆ. ಅನಂತರ ಪೌರತ್ವ ಪಡೆದವರಿಗೆ ನೀಡುವ ಎಲ್ಲ ಹಕ್ಕುಗಳನ್ನು ನೀಡುವುದಿಲ್ಲ ಎಂದರೆ, ಏನು ಮಾಡಲು ಸಾಧ್ಯ?
-ಮಹೇಂದ್ರ ಕುಮಾರ್, ಚಿಂತಕ








