ಗುರುವಾರ ದಿನವಿಡೀ ಕಾರ್ಯಕ್ರಮ; ರಾತ್ರಿ ಪೇಜಾವರ ಶ್ರೀ ಅಸ್ವಸ್ಥ
ಉಡುಪಿ, ಡಿ.20: 89ರ ಹರೆಯದಲ್ಲಿದ್ದರೂ, ನವ ತರುಣನಂತೆ ದಿನವಿಡೀ ಸಕ್ರಿಯರಾಗಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀ ಗುರುವಾರವೂ ಎಂದಿನಂತೆ ದಿನವಿಡೀ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆದರೆ ರಾತ್ರಿ ವೇಳೆ ಅವರಿಗೆ ಜ್ವರ ಬಾಧಿಸಿದ್ದು, ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ತಿರುಪತಿಗೆ ಸ್ವಾಮೀಜಿ ಭೇಟಿ ನೀಡಿದ್ದರು. ಆಗ ಅವರಿಗೆ ಶೀತ, ಕಫದಿಂದ ಅಸೌಖ್ಯತೆ ಕಾಡಿತ್ತು. ಆದರೂ ನಿನ್ನೆ ಬೆಳಗ್ಗೆ ಬಂಟ್ವಾಳ ತಾಲೂಕಿನ ತಮ್ಮ ಹುಟ್ಟೂರು ರಾಮಕುಂಜ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಪಾಜಕದಲ್ಲಿ ತಾವು ನಿರ್ಮಿಸುತ್ತಿರುವ ಆನಂದತೀರ್ಥ ವಸತಿ ಶಾಲೆಯಲ್ಲಿ ಇನ್ನೊಂದು ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಆಗಲೇ ಅವರಿಗೆ ಜ್ವರ ಬಾಧಿಸುತ್ತಿತ್ತು ಎಂದು ಹೇಳಲಾಗಿದೆ.
ಬಳಿಕ ಉಡುಪಿಗೆ ಬಂದು ರಾಜಾಂಗಣದಲ್ಲಿ ಎಂದಿನಂತೆ ಪ್ರವಚನವನ್ನೂ ಅವರು ನೀಡಿದ್ದರು. ಎಂದಿನಂತಿದ್ದ ಪೇಜಾವರಶ್ರೀಗಳು ಬೆಳಗಿನ ಜಾವ ಎರಡು ಗಂಟೆಗೆ ಎದ್ದು ತನ್ನ ದೈನಂದಿನ ಕಾರ್ಯಕಲಾಪಗಳಲ್ಲಿ ತೊಡಗಿದ್ದರು. ಆದರೆ 3 ಗಂಟೆ ಸುಮಾರಿಗೆ ಅವರು ಉಸಿರಾಟಕ್ಕೆ ಕಷ್ಟವಾಗುತ್ತಿರುವ ಬಗ್ಗೆ ಹೇಳಿಕೊಂಡಾಗ ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಆದರೆ ಆಗಲೇ ಅವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಗೆ ಕರೆದೊಯ್ಯಲಾಗಿತ್ತು.
‘ಸ್ವಾಮೀಜಿಯವರನ್ನು ಉಸಿರಾಟದ ತೊಂದರೆಗಾಗಿ ಗಂಭೀರ ಸ್ಥಿತಿಯಲ್ಲಿ ಬೆಳಗಿನ ಜಾವ 5 ಗಂಟೆಗೆ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ನ್ಯೂಮೋನಿಯಾಗೆ ಚಿಕಿತ್ಸೆ ನೀಡಲಾಗುತಿದ್ದು, ಪ್ರತಿರೋಧಕ (ಆ್ಯಂಟಿಬಯೋಟಿಕ್) ಔಷಧ ಹಾಗೂ ಪೂರಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ.’ ಎಂದು ಕೆಎಂಸಿ ಬೆಳಗ್ಗೆ 10ಗಂಟೆಗೆ ಬಿಡುಗಡೆಗೊಳಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ ತಿಳಿಸಿತ್ತು.
ಪ್ರಧಾನಿಯಿಂದ ಆರೋಗ್ಯ ವಿಚಾರಣೆ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಶ್ರೀಗಳ ಆಪ್ತ ಕಾರ್ಯದರ್ಶಿ ಟಿ.ಪಿ.ಅನಂತ್‌ಗೆ ದೂರವಾಣಿ ಕರೆ ಮಾಡಿ ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದರಲ್ಲದೇ, ಅವರು ಶೀಘ್ರವೇ ಗುಣಮುಖರಾಗಲು ಹಾರೈಸಿದರು.
ಅದೇ ರೀತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯೋಗಗುರು ಬಾಬಾ ರಾಮದೇವ್, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೂ ಸಹ ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿ ಕರೆ ಮಾಡಿದ್ದು, ಶೀಘ್ರ ಗುಣಮುಖರಾಗಲು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಪೇಜಾವರಶ್ರೀಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಸೇರಿದಂತೆ ದೇಶದ ವಿವಿದೆಡೆಗಳಲ್ಲಿ ಇರುವ ಶ್ರೀಮಠದ 80ಕ್ಕೂ ಅಧಿಕ ಶಾಖೆಗಳ ಅವರ ಶಿಷ್ಯರು, ವಿದ್ಯಾರ್ಥಿಗಳು, ಭಕ್ತರು ಹಾಗೂ ಅಭಿಮಾನಿಗಳು ವಿಶೇಷ ಜಪ, ಹವನ, ಭಜನೆ, ವಿಶೇಷ ಪ್ರಾರ್ಥನೆಗಳನ್ನು ನಡೆಸಿದರು.
ಸೋಸಲೆ ವ್ಯಾಸರಾಜ ಮಠ, ಮಂತ್ರಾಲಯಗಳ ಸ್ವಾಮೀಜಿಗಳೂ ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ತಮ್ಮ ತಮ್ಮ ಮಠ ಹಾಗೂ ಸಂಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿದರು. ಸಿರಿಗೆರೆ ತರಳಬಾಳು ಶ್ರೀಗಳು ಅವರ ಭೇಟಿಗೆ ಉಡುಪಿಗೆ ಆಗಮಿಸಲಿದ್ದಾರೆ.







