ವಂ.ಮಹೇಶ್ ಡಿಸೋಜರ ಸಂಶಯಾಸ್ಪದ ಸಾವಿನ ಪ್ರಕರಣ : ತನಿಖೆಗೆ ಆಗ್ರಹ
ಉಡುಪಿ, ಡಿ.20: ಕಳೆದ ಅ.11ರಂದು ರಾತ್ರಿ ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರುಗಳಾಗಿದ್ದ ವಂ.ಮಹೇಶ್ ಡಿಸೋಜ ಅವರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣದ ಕುರಿತಂತೆ ಪೊಲೀಸರು ಚರ್ಚ್‌ನ ಧರ್ಮಗುರು ಗಳಾಗಿರುವ ವಂ. ಡೆನ್ನಿಸ್ ಡೇಸಾ ಹಾಗೂ ಸಹಾಯಕ ಧರ್ಮಗುರು ಗಳಾಗಿರುವ ವಂ.ಅಶ್ವಿನ್ ಅರಾನ್ಹ ಅವರ ವಿಚಾರಣೆ ನಡೆಸಬೇಕು ಎಂದು ಚರ್ಚ್‌ನ ಸಕ್ರಿಯ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ಟಿಫನ್ ರಿಚರ್ಡ್ ಲೋಬೊ ಆಗ್ರಹಿಸಿದ್ದಾರೆ.
ಈ ಕುರಿತಂತೆ ತಾನು ಈಗಾಗಲೇ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ವಿವರವಾದ ದೂರನ್ನು ಸಲ್ಲಿಸುವುದಾಗಿ ತಿಳಿಸಿದರು. ದಿ.ವಂ.ಮಹೇಶ್ ಡಿಸೋಜ ಅವರು ತನಗೆ ಚಿರಪರಿಚಿತರಾಗಿದ್ದು, ನನ್ನೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಅವರ ಅಕಾಲಿಕ ಸಂಶಯಾಸ್ಪದ ಸಾವು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದವರು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನನಗೆ ತಿಳಿದಂತೆ ಪಂ.ಮಹೇಶ್ ಡಿಸೋಜ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದು, ಸಚ್ಚಾರಿತ್ರವಂತರಾಗಿದ್ದರು. ಅವರ ನಿಗೂಢ ಸಾವಿಗೆ ಚರ್ಚ್‌ನ ಉಳಿದಿಬ್ಬರು ಧರ್ಮಗುರುಗಳು ಕಾರಣವೆಂದು ನಂಬಲು ತನಗೆ ಬಲವಾದ ಕಾರಣಗಳಿವೆ ಎಂದವರು ತಿಳಿಸಿದರು.
ವಂ.ಡೆನ್ನಿಸಾ ಡೇಸಾರ ಕೈಕೆಳಗೆ ಕೆಲಸ ಮಾಡುತಿದ್ದ ಮಹೇಶ್ ಡಿಸೋಜ, ಡೇಸಾರಿಂದ ತೀವ್ರ ಮಾನಸಿಕ ಕಿರುಕುಳ, ಹಿಂಸೆ ಅನುಭವಿಸಿದ್ದರು ಎಂದು ಹೇಳಿದ ಅವರು, ಈ ಬಗ್ಗೆ ಅವರು ತನಗೆ ಮೊಬೈಲ್ ಸಂದೇಶಗಳ ಮೂಲಕ ವಿವರಿಸಿದ್ದರು. ತನ್ನಂತೆ ಹಲವರೊಂದಿಗೆ ಅವರು ಈ ವಿಷಯವನ್ನು ಹಂಚಿಕೊಂಡಿದ್ದರು ಎಂದರು.
ಕಳೆದ ಮಾರ್ಚ್ ತಿಂಗಳಲ್ಲಿ ಅನಾಮಧೇಯ ಪತ್ರದ ಮೂಲಕ ಮಹೇಶ್ ಡಿಸೋಜ ಅವರ ತೆಜೋವಧೆ ಮಾಡಲಾಗಿತ್ತು. ಅದರಲ್ಲಿ ಅವರ ಬಗ್ಗೆ ಕೀಳು ಅಭಿರುಚಿಯಲ್ಲಿ ಬರೆಯಲಾಗಿತ್ತು. ಅಸಹಜ ಸಾವು ಸಂಭವಿಸಿದ ಕೂಡಲೇ ಪೊಲೀಸರಿಗೆ ತಿಳಿಸಿಲ್ಲ. ಚರ್ಚ್‌ಗೆ ಸಂಬಂಧಿಸಿದ ಸಾಕಷ್ಟು ಮಂದಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ದೂರಿದರು.
ಮೃತರ ಬಳಿ ಲ್ಯಾಪ್‌ಟಾಪ್, ಐಫೋನ್, ಡಿಜಿಟಲ್ ಮೊಬೈಲ್, ಕೈಗಡಿಯಾರ ಇತ್ಯಾದಿಗಳಿದ್ದು, ಇವುಗಳಲ್ಲಿ ಸಾವಿಗೆ ಸಂಬಂಧ ಪಟ್ಟ ಸಾಕ್ಷಿ ಇದ್ದಿರುವ ಸಾಧ್ಯತೆ ಇದ್ದು, ಇದನ್ನು ಆರೋಪಿಗಳು ಸಾಕ್ಷ ನಾಶ ಮಾಡಿರುವ ಸಂಶಯವಿದೆ ಎಂದು ಹೇಳಿದರು. ಆದುದರಿಂದ ಈ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ತೀವ್ರ ವಿಚಾರಣೆಗೆ ಒಳಪಡಿಸಿದರೆ, ಸತ್ಯಾಂಶ ಬಯಲಿಗೆ ಬರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರೋಬರ್ಟ್ ಗುಜಾರಿಯಾ, ಶಿರ್ವ ಚರ್ಚ್‌ನ ಸದಸ್ಯರಾದ ಸುನಿಲ್ ಕಾಬ್ರಾಲ್, ಕೊನ್ರಾಡ್ ಕಾಸ್ತಾಲಿನೊ, ಜಾನ್ಸನ್ ಡಾಲ್ಫಿ ಕಾಸ್ತಲಿನೊ ಉಪಸ್ಥಿತರಿದ್ದರು.







