ಕುದ್ರೋಳಿ ಬಗ್ಗೆ ಟಿವಿ ಚಾನಲ್ ಗಳಲ್ಲಿ ಸುಳ್ಳು ಸುದ್ದಿ, ಸ್ಥಳೀಯರ ಆಕ್ರೋಶ
ಪೊಲೀಸರ ಮೇಲೆ ಹಲ್ಲೆಯಾಗಿಲ್ಲ : ಪೊಲೀಸ್ ಇಲಾಖೆ

ಮಂಗಳೂರು, ಡಿ. 20: "ನಗರದ ಕುದ್ರೋಳಿ ಪ್ರದೇಶದಲ್ಲಿ ಕಲ್ಲು ತೂರಾಟವಾಗುತ್ತಿದೆ, ಅಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ" ಇತ್ಯಾದಿ ಸುಳ್ಳು ಸುದ್ದಿಗಳನ್ನು ಕೆಲವು ಟಿವಿ ಚಾನಲ್ ಗಳು ಶುಕ್ರವಾರ ಮಧ್ಯಾಹ್ನ ಪ್ರಸಾರ ಮಾಡಿದ್ದು, ಜನರಲ್ಲಿ ಅನಗತ್ಯವಾಗಿ ಭಯದ ವಾತಾವರಣ ಉಂಟು ಮಾಡಿತು.
ಶುಕ್ರವಾರ ಜುಮಾ ನಮಾಝ್ ಮುಗಿಯುತ್ತಲೇ "ಕುದ್ರೋಳಿಯಲ್ಲಿ ಕಲ್ಲು ತೂರಾಟ ನಡೆಯುತ್ತಿದೆ, ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವಕರು ಜಮಾವಣೆಯಾಗಿ ಪರಿಸ್ಥಿತಿ ಗಂಭೀರವಾಗಿದೆ... ಅಲ್ಲಿ ಪೊಲೀಸ್ ಪಡೆಗಳು ಹೋಗಿವೆ... " ಎಂಬಂತೆ ಟಿವಿ ಚಾನಲ್ ಒಂದು ಮೊದಲು ಸುಳ್ಳು ಸುದ್ದಿ ಪ್ರಸಾರ ಮಾಡಿತು. ಅದರ ಬೆನ್ನಿಗೇ ಎಲ್ಲೆಡೆ ಈ ಸುಳ್ಳು ಸುದ್ದಿ ಹರಡಿತು. ಗುರುವಾರ ಇಬ್ಬರು ಪೊಲೀಸ್ ಗುಂಡಿಗೆ ಬಲಿಯಾಗಿ ಆತಂಕಿತರಾಗಿದ್ದ ಜನರು ಈ ಸುಳ್ಳು ಸುದ್ದಿ ಕೇಳಿ ಮತ್ತಷ್ಟು ಆತಂಕಕ್ಕೆ ಒಳಗಾದರು. ಮೊಬೈಲ್ ಇಂಟರ್ನೆಟ್ ಇಲ್ಲದ ಕಾರಣ ವಾಟ್ಸಾಪ್ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಒಬ್ಬರಿಗೊಬ್ಬರು ಫೋನ್ ಮಾಡಿ " ಹೌದಾ... ಹೌದಾ.. " ಎಂದು ವಿಚಾರಿಸಲು ಪ್ರಾರಂಭಿಸಿದರು ಎಂದು ಕುದ್ರೋಳಿ ನಿವಾಸಿಯೊಬ್ಬರು ವಿವರಿಸಿದ್ದಾರೆ.
ಆದರೆ ಕುದ್ರೋಳಿಯಲ್ಲಿ ಅಂತಹ ಯಾವುದೇ ಪರಿಸ್ಥಿತಿ ನಿರ್ಮಾಣ ಆಗಿರಲೇ ಇಲ್ಲ ಎಂದು ಅಲ್ಲಿಗೆ ಭೇಟಿ ನೀಡಿದ ವಾರ್ತಾಭಾರತಿ ವರದಿಗಾರನಿಗೆ ಜನರು ಮಾಹಿತಿ ನೀಡಿದರು. ಟಿವಿ ಚಾನಲ್ ಗಳ ಸುಳ್ಳು ಸುದ್ದಿ ಪ್ರಸಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು " ಅಲ್ಲಿ ಗುರುವಾರ ಪೊಲೀಸ್ ಗುಂಡಿಗೆ ಬಲಿಯಾದ ಯುವಕ ನೌಶೀನ್ ನ ಮೃತದೇಹ ಸಂದರ್ಶನಕ್ಕೆ ಹಾಗು ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರೂ ಪರಿಸ್ಥಿತಿ ಶಾಂತವಾಗಿತ್ತು. ಜನರು ಯಾವುದೇ ರೀತಿಯ ಹಿಂಸೆಗೆ ಇಳಿದಿರಲಿಲ್ಲ. ಆದರೆ ಟಿವಿ ಚಾನಲ್ ಗಳ ಸುಳ್ಳು ಸುದ್ದಿಯಿಂದ ಕುದ್ರೋಳಿಯ ಬಗ್ಗೆ ಕೆಟ್ಟ ಹೆಸರು ಬರುವಂತಾಯಿತು ಮತ್ತು ಇತರೆಡೆಯ ಜನರಿಗೆ ಆತಂಕ ಹರಡುವಂತಾಯಿತು. ನಾವು ಶಾಂತವಾಗಿದ್ದೇವೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುತ್ತಿದ್ದೇವೆ. ಆದರೂ ಮಾಧ್ಯಮಗಳು ಹೀಗೆ ಮಾಡುತ್ತಿರುವುದು ತೀವ್ರ ನೋವಿನ ಸಂಗತಿ" ಎಂದು ಅಸಮಾಧಾನ ಹೊರಹಾಕಿದರು.
ಇದೇ ನೋವಿನಿಂದ ಸಂಜೆ ನೌಶೀನ್ ಅಂತಿಮ ಸಂಸ್ಕಾರದ ವರದಿ ಮಾಡಲು ತೆರಳಿದ್ದ ವರದಿಗಾರರಿಗೆ " ನೀವು ಬಂದರೆ ಮತ್ತೆ ಸುಳ್ಳು ಸುದ್ದಿ ಹರಡಿ ವಾತಾವರಣ ಹಾಳು ಮಾಡುತ್ತೀರಿ, ಬರಲೇ ಬೇಡಿ " ಎಂದು ಹೇಳುವುದು ಕಂಡು ಬಂತು.
ಸಂಜೆಯ ಬಳಿಕ ಮಂಗಳೂರಿನ ಫಳ್ನೀರ್ ಬಳಿ " ಪೊಲೀಸರೊಬ್ಬರ ಮೇಲೆ ಹಲ್ಲೆಯಾಗಿದೆ, ಪರಿಸ್ಥಿತಿ ಗಂಭೀರವಾಗಿದೆ " ಎಂದು ಮತ್ತೆ ವದಂತಿ ಹರಡತೊಡಗಿತು. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಗರದ ಪೊಲೀಸ್ ಕಮಿಷನರ್ ಕಚೇರಿ ಮೂಲಗಳು ವಾರ್ತಾಭಾರತಿಗೆ ತಿಳಿಸಿವೆ.







