ಎನ್ಆರ್ ಸಿ ಕುರಿತು ಅಮಿತ್ ಶಾ ಹೇಳಿಕೆಯ ಟ್ವೀಟ್ ಡಿಲಿಟ್ ಮಾಡಿದ ಬಿಜೆಪಿ

ಹೊಸದಿಲ್ಲಿ, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ದೇಶದಲ್ಲಿ ಪ್ರತಿಭಟನೆ ಕಾವು ಏರಿದ್ದು, ಡಿಸೆಂಬರ್ 19ರ ತನ್ನ ವಿವಾದಾತ್ಮಕ ಟ್ವೀಟ್ ಅನ್ನು ಬಿಜೆಪಿಯ ಅಧಿಕೃತ ಹ್ಯಾಂಡಲ್ ಅಳಿಸಿದೆ.
ಲೋಕಸಭಾ ಚುನಾವಣೆ ಸಂದರ್ಭ ಎಪ್ರಿಲ್ ಮೊದಲ ವಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸುವುದಾಗಿ ಪಕ್ಷ ಭರವಸೆ ನೀಡುತ್ತದೆ ಎಂದು ಹೇಳಿದ್ದರು. ‘‘ಬೌದ್ಧರು, ಹಿಂದೂ ಹಾಗೂ ಸಿಕ್ಖರನ್ನು ಹೊರತುಪಡಿಸಿ ಉಳಿದ ಪ್ರತಿಯೊಬ್ಬ ಒಳನುಸುಳುಕೋರರನ್ನು ದೇಶದಿಂದ ಹೊರಗೆ ಹಾಕಲಾಗುವುದು’’ ಎಂದು ಅಮಿತ್ ಶಾ ಹೇಳಿದ್ದರು. ಇದನ್ನು ಬಿಜೆಪಿ ಟ್ವೀಟ್ ಕೂಡ ಮಾಡಿತ್ತು. ಆದರೆ, ಗುರುವಾರ ಪ್ರತಿಭಟನೆ ತೀವ್ರಗೊಂಡಾಗಿ, ಬಿಜೆಪಿಯ ಅಧಿಕೃತ ಹ್ಯಾಂಡಲ್ ಈ ಟ್ವೀಟ್ ಅನ್ನು ಅಳಿಸಿದೆ.
ಬಿಜೆಪಿ ಟ್ವೀಟ್ ಅಳಿಸಿದ ಕೂಡಲೇ ಟಿಎಂಸಿ ನಾಯಕ ಡೆರಿಕ್ ಒಬ್ರಿಯಾನ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ಟ್ವೀಟ್ ಅನ್ನು ಅಳಿಸಿರಬಹುದು. ಆದರೆ, ಅಮಿತ್ ಶಾ, ‘‘ನಾವು ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅನುಷ್ಠಾನಗೊಳಿಸಲಿದ್ದೇವೆ’’ ಎಂದು ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಅಳಿಸಲು ಸಾಧ್ಯವಿಲ್ಲ’’ ಎಂದಿದ್ದಾರೆ. ‘‘ಏನು ನಡೆದಿದೆ. ಅದು ನಡೆದು ಹೋಯಿತು’’ ಎಂದು ಹಲವು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ಇತರರು, ಪಶ್ಚಿಮಬಂಗಾಳದ ಬಿಜೆಪಿಯ ಟ್ವಿಟರ್ ಪೇಜ್‌ನಲ್ಲಿ ಈ ಹೇಳಿಕೆ ಈಗಲೂ ಇದೆ ಎಂದು ಬೆಟ್ಟು ಮಾಡಿದ್ದಾರೆ.







