"ಮಂಗಳೂರಿನ ಗೋಲಿಬಾರ್‌ಗೆ ಕಮೀಷನರ್ ಹರ್ಷ ಹೊಣೆ"
ಬೆಂಗಳೂರು, ಡಿ.20: ಪೌರತ್ವ(ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಂಗಳೂರಿನ ಪೊಲೀಸರು ನಡೆಸಿರುವ ಗೋಲಿಬಾರ್‌ನಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದಕ್ಕೆ ಪೊಲೀಸ್ ಕಮೀಷನರ್ ಹರ್ಷ ನೇರಹೊಣೆ ಹೊರಬೇಕು ಎಂದು ಫ್ಯಾಸಿಸ್ಟ್ ವಿರೋಧಿ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎಸ್.ಬಾಲನ್, ಕಳೆದ ಹಲವಾರು ದಿನಗಳಿಂದ ಪ್ರತಿಭಟನೆಗಳಿಗೆ ಅವಕಾಶ ನೀಡದೆ ಸತಾಯಿಸುತ್ತಿದ್ದ ಕಮಿಷನರ್ ಹರ್ಷ ಇದೀಗ ನಗರದಲ್ಲಿ ಸೆಕ್ಷನ್ 144 ಹೆಸರಿನಲ್ಲಿ ಜನತೆಯ ಮೇಲೆ ಪೊಲೀಸ್ ಲಾಠಿಚಾರ್ಜ್ ಹಾಗೂ ಗೋಲಿಬಾರ್ ಮೂಲಕ ಭೀಕರ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿದರು.
ಮಂಗಳೂರು ನಗರದ ಹೃದಯಭಾಗದಲ್ಲಿ ಶಾಲಾ-ಕಾಲೇಜುಗಳು, ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಹಲವು ಕಚೇರಿಗಳಿದ್ದು, ಜನದಟ್ಟಣೆ ಅಧಿಕವಾಗಿರುತ್ತದೆ. ಇಲ್ಲಿ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ. ಆದರೆ, ಗುರುವಾರ ಏಕಾಏಕಿ ಲಾಠಿ ಚಾರ್ಜ್ ಮಾಡುವ ಮೂಲಕ ಪ್ರಯಾಣಿಕರು, ವಿದ್ಯಾರ್ಥಿಗಳ, ಸಾಮಾನ್ಯ ಜನರ ಮೇಲೆ ಕಾರಣವಿಲ್ಲದೆ ಲಾಠಿ ಬೀಸಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವ ವಿಷಯ ತಿಳಿಯದ ಅನೇಕರು ನಗರಕ್ಕೆ ಆಗಮಿಸಿದ್ದರು. ಅತ್ಯಂತ ಜಾಣ್ಮೆ ಹಾಗೂ ತಾಳ್ಮೆಯಿಂದ ನಿಭಾಯಿಸುವ ಬದಲಿಗೆ, ಜನರ ಮೇಲೆ ಲಾಠಿ ಬೀಸಿ, ಗಾಯಗೊಳಿಸಿರುವುದು ಸಲ್ಲ. ಜನ ಚೆಲ್ಲಾಪಿಲ್ಲಿಯಾಗಿ ಸಿಕ್ಕಿದೆಡೆಗಳಲ್ಲಿ ಪೊಲೀಸರು ಬೆನ್ನಟ್ಟುತ್ತಾ ಜನರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಪೊಲೀಸರು ಗೋಲಿಬಾರ್ ಮಾಡಿ ಇಬ್ಬರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿದರು.
ಎಸ್‌ಡಿಪಿಐನ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮದ್ ತುಂಬೆ ಮಾತನಾಡಿ, ಪೊಲೀಸ್ ಫೈರಿಂಗ್‌ನಲ್ಲಿ ಇಬ್ಬರು ಮೃತಪಟ್ಟಿದ್ದರೂ, ಪೊಲೀಸ್ ಕಮಿಷನರ್ ಹರ್ಷ ಇತರ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಾ ಯಾರೂ ಸತ್ತಿಲ್ಲ ಎಂದು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯ ಹೇಳಿಕೆ. ನಗರದಲ್ಲಿ ನಡೆದ ಎಲ್ಲ ಹಿಂಸಾತ್ಮಕ ಘಟನೆಗಳು ಪೊಲೀಸರ ವರ್ತನೆಯಿಂದಲೇ ಉದ್ಭವಿಸಿವೆ ಎಂದು ಆಪಾದಿಸಿದರು.
ಮಂಗಳೂರಿನಲ್ಲಿ ಈ ಮಟ್ಟದ ಸ್ಥಿತಿಯನ್ನು ನಿರ್ಮಾಣ ಮಾಡಲು ಪೊಲೀಸ್ ಅಧಿಕಾರಿಗಳು ಪೂರ್ವಯೋಜಿತವಾಗಿ ಸಂಚು ರೂಪಿಸಿದ್ದರು ಎಂದ ಅವರು, ಲಾಠಿ ಚಾರ್ಜ್ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದಾಗಲೂ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಿದರು.
ಮಂಗಳೂರಿನ ಪೊಲೀಸ್ ಫೈರಿಂಗ್ ಹಾಗೂ ದೌರ್ಜನ್ಯಗಳ ಬಗ್ಗೆ ಸರಕಾರ ನ್ಯಾಯಾಂಗ ತನಿಖೆ ಕೈಗೊಳ್ಳಬೇಕು. ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಈ ಘಟನೆಗೆ ಕಾರಣರಾದ ಪೊಲೀಸ್ ಕಮಿಷನರ್ ಹರ್ಷರನ್ನು ಸೇವೆಯಿಂದ ತಕ್ಷಣ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಮಿಯಾ ನದ್ವತ್ತುಲ್ ಅಬ್ರಾರ್‌ನ ಮೌಲನಾ ಶಾಕೀಲ್ ಅಹ್ಮದ್ ಸೌದಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮದ್ ಶಾಕಿಫ್, ವಕೀಲ ತ್ವಾಹಿರ್ ಉಪಸ್ಥಿತರಿದ್ದರು.







