ಮಮತಾ ಬ್ಯಾನರ್ಜಿ ಹೇಳಿಕೆ ಸಂಸತ್ತಿಗೆ ಅವಮಾನ: ಸ್ಮೃತಿ ಇರಾನಿ
ಕೋಲ್ಕತ್ತಾ, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ವಿಶ್ವಸಂಸ್ಥೆಯ ನಿಗಾದಲ್ಲಿ ಜನಮತ ನಡೆಸಬೇಕು ಎಂಬ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಗ್ರಹವನ್ನು ಶುಕ್ರವಾರ ಟೀಕಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಬ್ಯಾನರ್ಜಿ ಹೇಳಿಕೆ ಸಂಸತ್ತಿಗೆ ಅವಮಾನ ಉಂಟು ಮಾಡಿದೆ ಎಂದಿದ್ದಾರೆ.
ಕೋಲ್ಕತ್ತಾದ ಸಿಟಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಕೇಂದ್ರ ಜವಳಿ ಖಾತೆ ಸಚಿವೆ ಈ ಹೇಳಿಕೆ ನೀಡಿದ್ದಾರೆ. ‘‘ಮಮತಾ ಬ್ಯಾನರ್ಜಿ ಅವರ ಹೇಳಿಕೆ ಭಾರತದ ಸಂಸತ್ತಿಗೆ ಅವಮಾನ ಉಂಟು ಮಾಡಿದೆ’’ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಸ್ಮೃತಿ ಇರಾನಿ ಈ ಪ್ರತಿಕ್ರಿಯೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ವಿಶ್ವಸಂಸ್ಥೆಯ ನಿಗಾದಲ್ಲಿ ಜನಮತ ನಡೆಸಲು ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಭಯವಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.