ಜಮ್ಮುಕಾಶ್ಮೀರದಲ್ಲಿ ಉದ್ಯೋಗ, ಭೂ ಒಡೆತನಕ್ಕೆ 15 ವರ್ಷಗಳ ವಾಸ್ತವ್ಯ ನಿಯಮ: ಕೇಂದ್ರ ಚಿಂತನೆ
ಹೊಸದಿಲ್ಲಿ, ಡಿ. 20: ಜಮ್ಮು ಹಾಗೂ ಕಾಶ್ಮೀರದಲ್ಲಿ 370ನೆ ವಿಧಿ ರದ್ದುಗೊಳಿಸಿದ ಬಳಿಕ ಇಲ್ಲಿ ಹೊರಗಿನವರು ನೆಲೆಸುತ್ತಿರುವುದರಿಂದ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ರಚನೆಯಾದ ಕೇಂದ್ರಾಡಳಿತ ಪ್ರದೇಶಗಳಾದ ಲಡಾಕ್ ಹಾಗೂ ಜಮ್ಮುಕಾಶ್ಮೀರದದ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆತಂಕ ನಿವಾರಿಸಲು ಸರಕಾರಿ ಉದ್ಯೋಗ, ಭೂ ಮಾಲಿಕತ್ವ, ಸರಕಾರಿ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್ಗಳಿಗೆ ಸೀಟ್ ಪಡೆಯಲು 15 ವರ್ಷಗಳ ವಾಸ್ತವ್ಯದ ಅಗತ್ಯದ ಬಗ್ಗೆ ಕೇಂದ್ರ ಸರಕಾರ ಚಿಂತಿಸುತ್ತಿದೆ. ಉದ್ಯಮ ಆರಂಭಿಸಲು ಹಾಗೂ ಉದ್ಯೋಗಿಗಳಿಗೆ ಕ್ವಾರ್ಟರ್ಸ್ ನಿರ್ಮಿಸಲು ಕೈಗಾರಿಕೆಗಳು ಭೂಮಿ ಖರೀದಿಸಲು ಇಂತಹ ಯಾವುದೇ ಶರತ್ತು ಇಲ್ಲ ಎಂದು ಮೂಲಗಳು ತಿಳಿಸಿದೆ.
ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶದಂತಹ ಸೌಲಭ್ಯ ಲಭ್ಯವಾಗಲು ಹೊರಗಿನ ಕೆಲವು ವರ್ಗಗಳ ವ್ಯಕ್ತಿಗಳಿಗೆ ವಿನಾಯತಿ ನೀಡಲು ಕೇಂದ್ರದ ವಿವಿಧ ಸಚಿವಾಲಯಗಳು ಚಿಂತಿಸುತ್ತಿವೆ. ಈ ವರ್ಗದಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳು, ಅವರ ಮಕ್ಕಳು, ಜಮ್ಮುಕಾಶ್ಮೀರ ಹಾಗೂ ಲಡಾಖ್ನಲ್ಲಿ 10 ಅಥವಾ 12ನೇ ತರಗತಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ಇತರ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳು ಬರುತ್ತಾರೆ.