ದ.ಆಫ್ರಿಕಾಕ್ಕೆ ಬವುಮಾ ಅಲಭ್ಯ
► ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್

ಜೋಹಾನ್ಸ್‌ಬರ್ಗ್, ಡಿ.20: ಇಂಗ್ಲೆಂಡ್ ವಿರುದ್ಧ ಪ್ರಿಟೋರಿಯದಲ್ಲಿ ಬಾಕ್ಸಿಂಗ್ ಡೇಯಂದು ಆರಂಭವಾಗಲಿರುವ ಮೊದಲ ಟೆಸ್ಟ್‌ಗಿಂತ ಮೊದಲು ದಕ್ಷಿಣ ಆಫ್ರಿಕಾ ತೀವ್ರ ಹಿನ್ನಡೆ ಕಂಡಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಟೆಂಬಾ ಬವುಮಾ ಗಾಯದ ಸಮಸ್ಯೆಯಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಬವುಮಾ 7 ರಿಂದ 10 ದಿನಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಜ.3ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪತ್ರಿಕಾಪ್ರಕಟಣೆಯೊಂದರಲ್ಲಿ ತಿಳಿಸಿದೆ. ಬವುಮಾಗೆ ಬದಲಿ ಆಟಗಾರರನ್ನು ಆಯ್ಕೆ ಸಮಿತಿ ಈ ತನಕ ಪರಿಗಣಿಸಿಲ್ಲ. ಈಗ ನಡೆಯುತ್ತಿರುವ ಚತುರ್ದಿನ ದೇಶೀಯ ಪ್ರಥಮ ದರ್ಜೆಯ ಪಂದ್ಯದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಬಹುದು. ದಕ್ಷಿಣ ಆಫ್ರಿಕಾ ‘ಎ’ ಹಾಗೂ ಇಂಗ್ಲೆಂಡ್ ಮಧ್ಯೆ ಮೂರು ದಿನಗಳ ಪಂದ್ಯ ಶುಕ್ರವಾರ ಆರಂಭವಾಗಲಿದೆ.
29ರ ವಯಸ್ಸಿನ ಬವುಮಾ 39 ಟೆಸ್ಟ್ ಪಂದ್ಯಗಳಲ್ಲಿ 31.24ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆದರೆ, ಐದನೇ ಅಥವಾ ಆರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮವಾಗಿ ಆಡುವ ಸಾಮರ್ಥ್ಯ ಅವರಿಗಿದೆ. ದಕ್ಷಿಣ ಆಫ್ರಿಕಾ ತಂಡ : ಎಫ್‌ಡು ಪ್ಲೆಸಿಸ್(ನಾಯಕ), ಕ್ವಿಂಟನ್ ಡಿಕಾಕ್, ಡಿಯನ್ ಎಲ್ಗರ್, ಬೆರನ್ ಹೆಂಡ್ರಿಕ್ಸ್, ಕೇಶವ ಮಹಾರಾಜ್, ಏಡೆನ್ ಮರ್ಕರಮ್, ಝುಬೈರ್ ಹಂಝಾ, ಅನ್ರಿಚ್ ನೊರ್ಟ್ಜೆ, ಡೇನ್ ಪ್ಯಾಟರ್ಸನ್, ಅಂಡಿಲ್ ಫೆಹ್ಲುಕ್ವಾಯೊ, ವೆರ್ನಾನ್ ಫಿಲ್ಯಾಂಡರ್, ಡ್ವೇಯ್ನಾ ಪ್ರಿಟೋರಿಯಸ್, ಕಾಗಿಸೊ ರಬಾಡ, ರೂಡಿ ಸೆಕೆಂಡ್, ರಸ್ಸಿ ವ್ಯಾನ್‌ಡರ್ ಡಸ್ಸನ್.







