22 ವರ್ಷ ಹಳೆಯ ಜಯಸೂರ್ಯ ದಾಖಲೆ ಮುರಿಯುವತ್ತ ರೋಹಿತ್

ಹೊಸದಿಲ್ಲಿ, ಡಿ.20: ಭಾರತ ಹಾಗೂ ಶ್ರೀಲಂಕಾ ಮಧ್ಯೆ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಕಟಕ್ ನಗರ ಸಿದ್ಧವಾಗಿದೆ. ವಿಶಾಖಪಟ್ಟಣದಲ್ಲಿ ನಡೆದ ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮೊದಲ ವಿಕೆಟ್‌ಗೆ 200 ರನ್ ಜೊತೆಯಾಟ ನಡೆಸಿದ ಭಾರತದ ಆರಂಭಿಕ ಆಟಗಾರರು ಭದ್ರಬುನಾದಿ ಹಾಕಿಕೊಟ್ಟಿದ್ದರು. 2019ರಲ್ಲಿ ರೋಹಿತ್ ಶರ್ಮಾ ಭರ್ಜರಿ ಫಾರ್ಮ್‌ನಲ್ಲಿದ್ದು, ಈ ವರ್ಷ ಆಡಲಿರುವ ತನ್ನ ಕೊನೆಯ ಪಂದ್ಯದಲ್ಲಿ ಮಹತ್ವದ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇರಿಸಿದ್ದಾರೆ. ಭಾರತದ ಆರಂಭಿಕ ಆಟಗಾರ ರೋಹಿತ್‌ಗೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರ 22 ವರ್ಷಗಳ ಹಳೆಯ ದಾಖಲೆ ಯೊಂದನ್ನು ಮುರಿಯಲು ಇನ್ನು ಕೇವಲ 9 ರನ್ ಅಗತ್ಯವಿದೆ. ಜಯಸೂರ್ಯ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಆರಂಭಿಕ ಆಟಗಾರನಾಗಿದ್ದಾರೆ. 2019ರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ರೋಹಿತ್ ಈ ತನಕ 2,379 ರನ್ ಗಳಿಸಿದ್ದಾರೆ. 1997ರಲ್ಲಿ 2,387 ರನ್ ಗಳಿಸಿದ್ದ ಸನತ್ ಜಯಸೂರ್ಯ ಅವರ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದ್ದಾರೆ. ವಿಶಾಖಪಟ್ಟಣ ಏಕದಿನ ಪಂದ್ಯದಲ್ಲಿ 159 ರನ್ ಗಳಿಸಿದ್ದ ರೋಹಿತ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.





