ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಸೌರವ್ ಗಂಗುಲಿ ಪ್ರತಿಕ್ರಿಯೆ

ಹೊಸದಿಲ್ಲಿ, ಡಿ.21:ದೇಶದೆಲ್ಲೆಡೆ ಪೌರತ್ವ ಕಾಯ್ದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಶುಕ್ರವಾರ ವಿನಂತಿಸಿಕೊಂಡರು.
ವಿವಾದಿತ ವಿಷಯಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಈ ಮೊದಲು ಭಾರತದ ಮಾಜಿ ನಾಯಕ ಗಂಗುಲಿ ಹೇಳಿದ್ದರು.
‘‘ಶಾಂತಿಯನ್ನು ಕಾಪಾಡಿ ಎನ್ನುವುದು ನನ್ನ ಸಂದೇಶ. ನಾನಿದನ್ನು ರಾಜಕೀಯ ವಿಷಯವನ್ನಾಗಿಸಲು ಹೋಗುವುದಿಲ್ಲ. ಏಕೆಂದರೆ ನಾನು ಈ ಮಸೂದೆಯನ್ನು ಓದಿಲ್ಲ. ಯಾವುದೇ ವಿಷಯವನ್ನಾಗಲಿ ಅರ್ಥಮಾಡಿಕೊಳ್ಳದೇ ಹೇಳಿಕೆ ನೀಡುವುದು ಸರಿಯಲ್ಲ. ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಬೇಕು. ಏನಾದರೂ ವಿವಾದಗಳಿದ್ದರೆ ಅದಕ್ಕೆ ಸಂಬಂಧಪಟ್ಟವರೇ ಮಾತನಾಡುತ್ತಾರೆ. ನನಗೆ ಎಲ್ಲರ ಸಂತೋಷವೇ ಮುಖ್ಯ’’ ಎಂದು ಸೌರವ್ ಗಂಗುಲಿ ಹೇಳಿದ್ದಾರೆ.
ಗಂಗುಲಿ ಅವರ ಪುತ್ರಿ ಸನಾ ಅವರು ಖುಷ್ವಂತ್ ಸಿಂಗ್ ಬರೆದಿರುವ ಪುಸ್ತಕ 'ದಿ ಎಂಡ್ ಆಫ್ ಇಂಡಿಯಾ' ಪುಸ್ತಕದ ಸಾಲನ್ನು ಉಲ್ಲೇಖಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸನಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಟ್ವೀಟ್ ಮಾಡಿದ ಗಂಗುಲಿ,‘‘ಪೌರತ್ವ ವಿಚಾರದಿಂದ ನನ್ನ ಪುತ್ರಿ ಸನಾಳನ್ನು ದಯವಿಟ್ಟು ದೂರವಿಡಿ...ಈ ಪೋಸ್ಟ್‌ನಲ್ಲಿ ಸತ್ಯಾಂಶವಿಲ್ಲ..ರಾಜಕೀಯದ ಬಗ್ಗೆ ತಿಳಿದುಕೊಳ್ಳುವಷ್ಟು ವಯಸ್ಸು ಅವಳದ್ದಲ್ಲ’’ ಎಂದು ಹೇಳಿದ್ದರು.







