ಪೊಲೀಸ್ ಗುಂಡಿಗೆ ಬಲಿಯಾದವರ ಕುಟುಂಬವನ್ನು ಭೇಟಿಯಾದ ಸಿಎಂ ಯಡಿಯೂರಪ್ಪ
ಮುಖಂಡರ ಜತೆ ಸಭೆ

ಮಂಗಳೂರು, ಡಿ. 21: ಗುರುವಾರ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಇಂದು ತುರ್ತಾಗಿ ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಕುಟುಂಬದ ಜತೆ ಮಾತನಾಡಿದರು.
ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಅವರ ಸಹೋದರ, ಮಕ್ಕಳು, ಮೃತಪಟ್ಟ ಇನ್ನೋರ್ವ ನೌಶೀರ್ ಅವರ ಸಹೋದರ ಸೇರಿದಂತೆ ಕುಟುಂಬದ ಸದಸ್ಯರು ತಮ್ಮ ನೋವನ್ನು ಮುಖ್ಯಮಂತ್ರಿ ಜತೆ ಹಂಚಿಕೊಂಡರು. ಸರಕಾರ ನಿಮ್ಮ ಜತೆ ಇದೆ ಎಂದು ಸಿಎಂ ಸಮಾಧಾನಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಧ್ಯಾಹ್ನದ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲೇ ಗುರುವಾರ ನಡೆದ ಹಿಂಸಾಚಾರ ಮತ್ತು ಗೋಲಿಬಾರ್ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಸಭೆ ನಡೆಸಿದರು.
ನಂತರ ಪೊಲೀಸ್ ಆಯುಕ್ತರನ್ನು ಹೊರಗೆ ಕಳುಹಿಸಿ ಎರಡನೇ ಸುತ್ತಿನ ಸಭೆ ನಡೆಸಲಾಯಿತು. ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಎಡಿಜಿಪಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ಅಲ್ಲಿಂದ ಮಂಗಳೂರು ಸರ್ಕ್ಯೂಟ್ ಹೌಸ್‌ಗೆ ಆಗಮಿಸಿ, ಮುಸ್ಲಿಂ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್.ಲೋಬೊ ಉಪಸ್ಥಿತರಿದ್ದರು.
ಗೋಲಿಬಾರ್ ಘಟನೆ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ವಿನಾಕಾರಣ ಗೋಲಿಬಾರ್ ನಡೆಸಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಸರಕಾರಿ ಕೆಲಸ ಮತ್ತು ರಕ್ಷಣೆ ಕೊಡಬೇಕು. ಮಂಗಳೂರಿನಲ್ಲಿ ವ್ಯಾಪಕವಾಗಿರುವ ಗಾಂಜಾ ಮತ್ತು ಅಮಲು ಪದಾರ್ಥಗಳ ಸಾಗಾಟ, ಮಾರಾಟಕ್ಕೆ ಮಟ್ಟ ಹಾಕಬೇಕು. ಕೇರಳ ಗಡಿ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಸಹಿತ ಔಟ್‌ಪೋಸ್ಟ್ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಗೆ ಈ ಸಂದರ್ಭ ಕಾಂಗ್ರೆಸ್ ನಾಯಕರು ಮನವಿ ಮಾಡಿದರು.
ಮಂಗಳೂರಿನಲ್ಲಿ ಭೋಜನ ಸ್ವೀಕರಿಸಿದ ಮುಖ್ಯಮಂತ್ರಿ ಅಲ್ಲಿಂದ ಬಳಿಕ ಉಡುಪಿಗೆ ತೆರಳಿದರು.







