ಮಂಗಳೂರಿನಲ್ಲಿ ಮೂರು ಗಂಟೆ ಕರ್ಫ್ಯೂ ಸಡಿಲಿಕೆ: ಮಾರ್ಕೆಟ್‌ನಲ್ಲಿ ಜನಜಂಗುಳಿ

ಮಂಗಳೂರು, ಡಿ.21: ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಹೇರಲಾಗಿದ್ದ ಕರ್ಫ್ಯೂವನ್ನು ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೂ ಸಡಿಲಿಕೆಯಾಗಿದೆ. ಕರ್ಫ್ಯೂ ಸಡಿಲಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಜನಸಾಮಾನ್ಯರು ದಿನನಿತ್ಯ ಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳೆಲ್ಲ ಶನಿವಾರ 3 ಗಂಟೆ ನಂತರ ಕ್ರಮೇಣ ಜನ ಜಂಗುಳಿಯಿಂದ ಕೂಡಿಲಾರಂಭಿಸಿತು. ರಸ್ತೆಯಲ್ಲಿ ಬೈಕ್, ಕಾರು, ರಿಕ್ಷಾಗಳು ಓಡಲಾರಂಭಿಸಿದವು. ನಗರದ ಕೇಂದ್ರ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು-ಹಂಪಲು ಮಳಿಗೆಗಳು ತೆರೆಯಲ್ಪಟ್ಟವು. ದಿನಬಳಕೆಯ ವಸ್ತುಗಳನ್ನು ಗ್ರಾಹಕರು ಖುಷಿಯಿಂದಲೇ ಖರೀದಿಸಿದರು.
ನಗರದ ಶೇ.20ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಇನ್ನುಳಿದ ಬಹುತೇಕ ಮಳಿಗೆಗಳ ಬಾಗಿಲು ಮುಚ್ಚಲ್ಪಟ್ಟಿವೆ. ಹೂ, ಹಣ್ಣು, ತರಕಾರಿ, ಬೇಕರಿ, ಕೂಲ್‌ಡ್ರಿಂಕ್ಸ್, ಹಾಲಿನ ಮಳಿಗೆ, ಚಹಾ-ಉಪಹಾರ ಅಂಗಡಿ, ಸಣ್ಣಪುಟ್ಟ ಹೊಟೇಲ್‌ಗಳು ಗ್ರಾಹಕರ ಖರೀದಿಯ ಅಪೇಕ್ಷೆಯ ಆಸೆಗಣ್ಣಲ್ಲಿ ತೆರೆದಿದ್ದವು.
ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟವು ಅಬ್ಬರದಿಂದ ಕೂಡಿತ್ತು. ಎರಡು ದಿನಗಳಿಂದ ಮಾರಾಟವಾಗದೇ ಐಸ್‌ನಲ್ಲಿ ಇಟ್ಟಿದ್ದ ಮೀನುಗಳನ್ನು ಮಾರಲಾಗುತ್ತಿದೆ. ಆದಾಗ್ಯೂ, ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಏತನ್ಮಧ್ಯೆ, ಗ್ರಾಹಕರೂ ಮೀನಿನ ಬೆಲೆಗೆ ಗಮನ ಕೊಡದೇ ಮೀನು ಖರೀದಿಯಲ್ಲಿ ತನ್ಮಯರಾಗಿದ್ದರು.












