ಹಿಂಸಾತ್ಮಕ ಘಟನೆಗೆ ಕಾಂಗ್ರೆಸ್ ನಾಯಕರು ಕಾರಣ: ಶೋಭಾ ಕರಂದ್ಲಾಜೆ

ಮಂಗಳೂರು: ನಗರದಲ್ಲಿ ಗುರುವಾರ ನಡೆದ ಹಿಂಸಾತ್ಮಕ ಘಟನೆಗೆ ಕಾಂಗ್ರೆಸ್ ಮುಖಂಡರೇ ಕಾರಣ ಎಂದು ಸಂಸದೆ ಶೋಭಾ ಕರಂದ್ಞಾಜೆ ಆರೋಪಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಖಾದರ್‌ರವರು ಮಾಡಿದ ಪ್ರಚೋದ ನಕಾರಿ ಭಾಷಣ ನೀಡಿದ 24 ಗಂಟೆಯಲ್ಲಿ ಮಂಗಳೂರಿನಲ್ಲಿ ಬೆಂಕಿ ಬಿದ್ದಿದೆ. ಇದರ ಹೊಣೆಯನ್ನು ಕಾಂಗ್ರೆಸ್‌ನ ನಾಯಕರು ಹೊರಬೇಕಿದೆ ಎಂದರು.
ಬಂದರು ಅತ್ಯಂತ ಸೂಕ್ಷ್ಮ ಪ್ರದೇಶ. ಅಲ್ಲಿನ ನಾಲ್ಕೂ ರಸ್ತೆಗಳನ್ನು ಸಾವಿರಾರು ಜನರು ಮುತ್ತಿಗೆ ಹಾಕಿ ಪೊಲೀಸ್ ಠಾಣೆಯ ಬಂದೂಕುಗಳನ್ನು ಕೊಂಡೊಯ್ದು, ಅದನ್ನು ಮಾರಕವಾಗಿ ಬಳಸಬೇಕೆಂದು ಮುಂದಾಗಿದ್ದಾಗ ಪೊಲೀಸರು ಗೋಲಿಬಾರ್ ಕ್ರಮ ಕೈಗೊಂಡಿದ್ದಾರೆ. ಮೊದಲ ಬಾರಿಗೆ ಮಂಗಳೂರಿನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆತ ಆಗಿದೆ. ಕಾಶ್ಮೀರದಲ್ಲಿ ನಡೆದಿರುವ ಘಟನೆಗಳಲ್ಲಿ ಮುಖ ಮುಚ್ಚಿ ಪೊಲೀಸರು, ಸೈನಿಕರ ಮೇಲೆ ಕಲ್ಲೆಸೆಯುವುದನ್ನು ನಾವು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ನೋಡಿದ್ದೇವೆ.ಆದರೆ ಮಂಗಳೂರಿನಲ್ಲಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಕಾಲೇಜಿನ ಯುವಕರು ಮತ್ತು ಪಕ್ಕದ ರಾಜ್ಯದ ಕೇರಳದಿಂದ ಬಂದ ಯುವಕರು ಈ ಕೃತ್ಯ ನಡೆಸಿದ್ದಾರೆ. ಗೋಲಿಬಾರ್ ಆದ ಸಂದರ್ಭ ಅಲ್ಲಿದ್ದ ಸ್ಥಳೀಯ ಪ್ರತ್ಯಕ್ಷದರ್ಶಿಗಳೇ ಈ ಹೋರಾಟದಲ್ಲಿ ಭಾಗವಹಿಸಿದವರು ಸ್ಥಳೀಯರಲ್ಲ. ಎಲ್ಲರೂ ಪಕ್ಕದ ರಾಜ್ಯದಿಂದ ಬಂದಿರುವವರು ಎಂದು ಅವರು ಹೇಳಿದರು.
ಪಿಎಫ್‌ಐ ಮತ್ತು ಎಸ್‌ಡಿಪಿಐನ ನಾಯಕರು ಮಂಗಳೂರನ್ನು ಹಿಡಿತಕ್ಕೆ ಪಡೆಯಬೇಕೆಂಬ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದನ್ನಿಸುತ್ತದೆ. ಅದಕ್ಕಾಗಿ ಇದರ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು. ಯಾರು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಯಾರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಯಾರು ಕಲ್ಲೆಸೆದಿದ್ದಾರೆ, ಪೆಟ್ರೋಲ್ ಬಾಂಬ್ ಹಾಕಿದ್ದಾರೆ, ಯಾರು ಬೆಂಕಿ ಹಚ್ಚಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಘಟನೆಯ ಹಿಂದಿನ ಷಡ್ಯಂತ್ರ ಯಾರದ್ದು ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂಬುದಾಗಿ ಸರಕಾರನ್ನು ಆಗ್ರಹಿಸುವುದಾಗಿ ಹೇಳಿದರು.
ಕರಾವಳಿ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಕಾರ್ಯ ಪ್ರಚೋದನಕಾರಿ ಭಾಷಣದಿಂದ ಆರಂಭಗೊಂಡು ಅದು ನಿಜವಾಗಿಯೂ ಬೆಂಕಿ ಹಚ್ಚಿದೆ. ಇನ್ನು ಶಾಂತಿ ನೆಲೆಸಬೇಕು. ಪ್ರಚೋದನೆ ಮಾಡಿದವರ ಮೇಲೆ ತನಿಖೆ ಆಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಘಟನೆಯ ಸಮಗ್ರ ವರದಿಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಕಳುಹಿಸಲಿದೆ. ಕೇಂದ್ರ ಗೃಹ ಸಚಿವರು ನಿರಂತರವಾದ ಸಂಪರ್ಕದಲ್ಲಿದ್ದಾರೆ. ಮುಖ ಮುಚ್ಚಿ ಕಲ್ಲೆಸೆಯುವಂತದ್ದು, ಪೆಟ್ರೋಲ್ ಬಾಂಬ್ ಹಾಕಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ತಿಳಿಸಿದರು.
ಪಕ್ಕದ ರಾಜ್ಯದಿಂದ ಬಂದವರ ಬಂಧನವಾಗಿದೆಯೇ ಎಂಬ ಪ್ರಶ್ನೆಗೆ, ಪತ್ರಕರ್ತರೊಬ್ಬರು ಯಾವುದೇ ಗುರುತುಪತ್ರ ಇಲ್ಲದೆ ಮಾರಕಾಸ್ತ್ರದೊಂದಿಗೆ ಬಂದಿದ್ದರು. ಅವರ ಬಂಧನವಾಗಿದೆ ಎಂಬ ವರದಿ ಇದೆ. ಉಳಿದವರನ್ನು ಬಂಧಿಸಿರುವ ಬಗ್ಗೆ ವರದಿ ಇಲ್ಲ ಎಂದು ಶೋಭಾ ಕರಂದ್ಲಾಜೆ ಉತ್ತರಿಸಿದರು.
ಅವರಲ್ಲಿ ಆಯುಧಗಳಿದ್ದವೇ ಎಂಬ ಪ್ರಶ್ನೆಗೆ, ಗೊತ್ತಿಲ್ಲ. ಅದು ತನಿಖೆಯಿಂದ ತಿಳಿಯಬೇಕಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದಾಗ, ನೀವು ಈ ಬಗ್ಗೆ ಟ್ವೀಟ್ ಮಾಡಿದ್ದೀರಲ್ಲ ಎಂದು ಪತ್ರಕರ್ತರೊಬ್ಬರು ಮರು ಪ್ರಶ್ನಿಸಿದರು.
ಖಂಡಿತವಾಗಿಯೂ ಅವರಲ್ಲಿ ಮಾರಕಾಸ್ತ್ರ ಇದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ಅವರು ಪತ್ರಕರ್ತ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆನ್ನುವುದು ವರದಿ ಇದೆ. ಪತ್ರಕರ್ತನಾಗಿ ಬಂದ ಮಾಹಿತಿ ಇರಲಿಲ್ಲ ಅದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಮಾರಕಾಸ್ತ್ರ ಇದ್ದ ಮೇಲೆ ಅವರನ್ನು ಬಿಡುಗಡೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ, ಅವರನ್ನು ಬಿಟ್ಟಿಲ್ಲ. ಬಂಧಿಸಲಾಗಿದೆ ಎಂದವರು ಉತ್ತರಿಸಿದರು.
ಕರ್ನಾಟಕದಲ್ಲಿ ನಡೆದಿರುವ ಪ್ರಶಾಂತ್ ಪೂಜಾರಿ, ಮಡಿವಾಳ, ರುದ್ರೇಶ್ ಮೊದಲಾದವರ ಕೊಲೆ ಪ್ರಕರಣಗಳಲ್ಲಿ ಪಿಎಫ್‌ಐ ಪಾತ್ರ ಇರುವುದು ಸಾಬೀತಾಗಿದೆ. ಪಿಎಫ್‌ಐನವರು ರಾಜ್ಯದಲ್ಲಿ ಮಾರಕಾಸ್ತ್ರಗಳ ಮೂಲಕ ಬಿಜೆಪಿ ಮತ್ತು ಪರಿವಾರದ ಹಲವು ಕಾರ್ಯಕರ್ತರನ್ನು ಹತ್ಯೆ ಮಾಡಿರುವಂತದ್ದು ಸಾಬೀತಾಗಿದೆ. ತನ್ವೀರ್ ಸೇಟ್ ಎಂಬ ಮಾಜಿ ಸಚಿವರನ್ನು ಮಾರಕಾಸ್ತ್ರದಿಂದ ಕೊಲ್ಲಲು ಪ್ರಯತ್ನಿಸಿರುವುದು ಕೂಡಾ ಪಿಎಫ್‌ಐ ಎಂಬುದು ಸಾಬೀತಾಗಿದೆ. ಈ ಕಾರಣಕ್ಕಾಗಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಪಿಎಫ್‌ಐ ನಿಷೇಧಿಸಬೇಕೆಂಬುದು ನಮ್ಮ ಆಗ್ರಹ. ಇದಕ್ಕಾಗಿ ಅಗತ್ಯ ದಾಖಲೆಗಳನ್ನು ರಾಜ್ಯ ಸರಕಾರ ಮಾಡುವಂತೆ ಆಗ್ರಹಿಸುವುದಾಗಿ ಹೇಳಿದರು.
ಗುರುವಾರ ಗಲಾಟೆ ನಡೆಯುತ್ತಿದ್ದ ಸಂದರ್ಭ ಪೊಲೀಸರು ಪಿಎಫ್‌ಐ, ಎಸ್‌ಡಿಪಿಐ ನಾಯಕರನ್ನು ಕರೆಯಿಸಿ ಅವರನ್ನು ಮುಂದೆ ಕಳುಹಿಸಿದ್ದರು, ಇದಕ್ಕೇನನ್ನುತ್ತೀರಿ ಎಂದರೆ, ಖಂಡಿತವಾಗಿಯೂ ಪಿಎಫ್‌ಐನವರು ಗಲಾಟೆ ನಿಲ್ಲಿಸುವವರಲ್ಲ. ಗಲಾಟೆ ಮಾಡುವವರು, ಬೆಂಕಿ ಹಚ್ಚುವವರು ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.
ಪೊಲೀಸ್ ಆಯುಕ್ತರೇ ಅವರನ್ನು ಕರೆಸಿದ್ದರಲ್ಲ ಎಂದಾಗ, ಈ ಬಗ್ಗೆ ಮಾತನಾಡೋಣ, ಎಲ್ಲದರ ಬಗ್ಗೆ ಚರ್ಚೆ ಆಗುತ್ತೆ ಎಂದು ಹೇಳಿದರು.
ಗೋಲಿಬಾರ್‌ಗೆ ಸಂಬಂಧಿಸಿ ಘಟನಾ ಸ್ಥಳದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನೀಡಿರುವ ಪ್ರಚೋದನಾಕಾರಿ ಹೇಳಿಕೆಯ ವೀಡಿಯೋ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ, ಎಲ್ಲದರ ಬಗ್ಗೆ ತನಿಖೆ ಆಗಲಿದೆ ಎಂದು ಶೋಭಾ ಕರಂದ್ಲಾಜೆ ಉತ್ತರಿಸಿದರು.







