ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಬಿಡದ ಪೊಲೀಸರು : ರಿಕ್ಷಾ ಚಾಲಕನ ಆರೋಪ

ಮಂಗಳೂರು, ಡಿ. 21: ಮಂಗಳೂರಿನಲ್ಲಿ ಶನಿವಾರವೂ ಕರ್ಫೂ ಮುಂದುವರಿದಿದ್ದರೂ ಪೊಲೀಸರ ಅಟ್ಟಹಾಸ, ಕಾನೂನು ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಎಷ್ಟಿತ್ತೆಂದರೆ ರೋಗಿಯೊಬ್ಬನನ್ನು ಸಾಗಿಸಲು ಕೂಡಾ ಬಿಡಲಿಲ್ಲ ಎಂಬ ಕಹಿ ಘಟನೆಯನ್ನು ಉಳ್ಳಾಲದ ರಿಕ್ಷಾ ಚಾಲಕ ಲತೀಫ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ನಾನು ಎಜೆ ಆಸ್ಪತ್ರೆಯ ಬಳಿಯಾಗಿ ಉಳ್ಳಾಲದ ಕಡೆಗೆ ರಿಕ್ಷಾದಲ್ಲಿ ಬರುತ್ತಿದ್ದಾಗ ಕೇರಳ ಮೂಲದ ನಾಲ್ಕು ಮಂದಿ ನನ್ನ ರಿಕ್ಷಾಕ್ಕೆ ಹತ್ತಿದರು. ಅದರಲ್ಲಿ ಒಬ್ಬ ರೋಗಿಯೂ ಇದ್ದರು. ಅವರನ್ನು ಕಂಕನಾಡಿ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ನಾನು ನಂತೂರ್ ರಸ್ತೆಯಾಗಿ ಪಂಪ್‌ವೆಲ್ ತಲುಪಿದಾಗ ಅಲ್ಲಿದ್ದ ಪೊಲೀಸರು ರಿಕ್ಷಾ ನಿಲ್ಲಿಸಿ ವಿಚಾರಿಸತೊಡಗಿದರು. ನಾನು ವಿಷಯ ಹೇಳುತ್ತಿದ್ದಂತೆ ರೋಗಿ ಸಹಿತ ಪ್ರಯಾಣಿಕರಿಗೆ ಲಾಠಿ ಬೀಸಿ ಕೆಳಗೆ ಇಳಿಸಿದರು. ನನಗೂ ಲಾಠಿಯಿಂದ ಹೊಡೆದರು. ಅವಾಚ್ಯ ಶಬ್ದದಿಂದ ಬೈದರು. ರೋಗಿ ಸಾರ್, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದರೂ ಕೇಳಲಿಲ್ಲ. ಹೆದರಿದ ರೋಗಿ ಸಹಿತ ಕೇರಳೀಯರು ನನ್ನ ರಿಕ್ಷಾ ಬಿಟ್ಟು ಆಸ್ಪತ್ರೆಯತ್ತ ಹೋದರು. ನಾನು ಉಪಾಯವಿಲ್ಲದೆ ಉಳ್ಳಾಲಕ್ಕೆ ಬಂದೆ. ಈ ಪೊಲೀಸರು ಮನುಷ್ಯತ್ವವೇ ಇಲ್ಲದಂತೆ ವರ್ತಿಸಿದರು. ಕರ್ಫ್ಯೂ ಸಂದರ್ಭ ರೋಗಿಗಳನ್ನು ಕರೆದೊಯ್ಯುವ ಅವಕಾಶವಿದ್ದರೂ ಪೊಲೀಸರು ಅದಕ್ಕೆ ಅಡ್ಡಿಪಡಿಸಿದರು ಎಂದು ಲತೀಫ್ ಆರೋಪಿಸಿದ್ದಾರೆ.





