ಕ್ರೈಸ್ತರಿಂದ ಶಿಕ್ಷಣಕ್ಕೆ ಶೇ.20ರಷ್ಟು ಕೊಡುಗೆ: ಬಿಷಪ್ ಜೆರಾಲ್ಡ್ ಲೋಬೊ

ಶಿರ್ವ, ಡಿ.21: ಭಾರತದಲ್ಲಿ ಶೇ.2.4ರಷ್ಟಿದ್ದ ಕೈಸ್ತರ ಸಂಖ್ಯೆ ಇಂದು ಶೇ.1.8ಕ್ಕೆ ಇಳಿದಿದೆ. ಆದರೆ ಕ್ರೈಸ್ತರು ಈ ದೇಶದ ಶಿಕ್ಷಣಕ್ಕೆ ಶೇ.20ರಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಶುಕ್ರವಾರ ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲೆಯ ವಜ್ರ ಮಹೋತ್ಸವದ ಸ್ಮರಣ ಸಂಚಿಕೆ ‘ವಜ್ರ ವರ್ಣ’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಆ ಕಾಲದಲ್ಲಿ ಕ್ರೈಸ್ತರು ಹಳ್ಳಿಗಳಿಗೆ ತೆರಳಿ ಶಿಕ್ಷಣ, ಆರೋಗ್ಯ ಸೇವೆ ನೀಡಿದರು. ಇದು ನಮ್ಮ ಸಮುದಾಯದ ಹೆಗ್ಗಳಿಕೆಯಾಗಿದೆ. ಉಡುಪಿ ಧರ್ಮಪ್ರಾಂತದ 72 ವಿದ್ಯಾ ಸಂಸ್ಥೆಗಳಲ್ಲಿ ಸುಮಾರು 37 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಹಿಂದಿನಿಂದಲೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು ಶಿಸ್ತು ಹಾಗೂ ವೌಲ್ಯಯುತ ಬೋಧನೆಯಿಂದ ಯುವ ಜನಾಂಗವನ್ನು ರೂಪಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕರ್ಣಾಟಕ ಬ್ಯಾಂಕ್ ಎಜಿಎಂ ಗೋಪಾಲಕೃಷ್ಣ ಸಾಮಗ, ದಾನಿ ವಿಲಿಯಂ ಅರಾಹ್ನಾ, ವಜ್ರ ವೈಭವ ಸಂಚಾಲಕ ಜೆರಾಲ್ಡ್ ಫೆರ್ನಾಂಡಿಸ್ ಮಾತನಾಡಿ ದರು. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಧರ್ಮಪ್ರಾಂತದ ಶಿಕ್ಷಣ ಅಧಿಕಾರಿ ವಂ.ವಿನ್ಸೆಂಟ್, ಸಹಾಯಕ ಧರ್ಮಗುರು ವಂ.ಜಿತೇಶ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕಿ್ಸಂ ಡೇಸಾ ಮುಖ್ಯ ಅತಿಥಿಗಳಾಗಿದ್ದರು.
ಗ್ರಾಪಂ ಉಪಾಧ್ಯಕ್ಷ ಹರೀಶ ಶೆಟ್ಟಿ, ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಉದ್ಯಮಿ ಎಲಿಯಾಸ್ ಡಿಸೋಜ ಉಪಸ್ಥಿತರಿದ್ದರು. ಸಂಚಾಲಕ ಅತಿ ವಂ.ಕ್ಲೆಮೆಂಟ್ ಮಸ್ಕರೇನಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುನೀತಾ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ದೇವರಾಯ ಶಾನುಬೋಗ್ ವರದಿ ವಾಚಿಸಿದರು. ಉಪನ್ಯಾಸಕಿ ಜೆಸಿಂತಾ ವಂದಿಸಿದರು. ಹಿರಿಯ ಉಪನ್ಯಾಸಕ ಎಡ್ವರ್ಡ್ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







