ಸಿಎಎ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ನಿಂದ ಸೂಕ್ತ ತೀರ್ಮಾನ: ಅರಳಿ ನಾಗರಾಜ್
ಬೆಂಗಳೂರು, ಡಿ.21: ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ತಿಳಿಸಿದ್ದಾರೆ.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕುರಿತು ಪರ-ವಿರೋಧದ ಚರ್ಚೆಗಳು ತಾರಕಕ್ಕೇರಿವೆ. ಈ ಸಂದರ್ಭದಲ್ಲಿ ಸಂವಿಧಾನದ ಆಶಯಗಳಿಗನುಸಾರವಾಗಿ ಸುಪ್ರೀಂ ಕೋರ್ಟ್ ತೀರ್ಮಾನ ನೀಡಲಿದೆ. ಅಲ್ಲಿಯವರೆಗೂ ಯಾರು ತಾಳ್ಮೆ ಕಳೆದುಕೊಳ್ಳಬಾರದೆಂದು ತಿಳಿಸಿದರು.
ನ್ಯಾಯಾಲಯಗಳ ಆದೇಶಗಳು ಆಡಳಿತ ಪಕ್ಷಗಳ ಆಣತಿಯಂತೆ ನಡೆಯುತ್ತವೆ ಎಂದು ಯಾರೂ ಭಾವಿಸಬಾರದು. ಮುಖ್ಯಮಂತ್ರಿ ಆಗಿದ್ದಾಗಲೇ ಬಿ.ಎಸ್. ಯಡಿಯೂರಪ್ಪ, ಸಚಿವರಾಗಿದ್ದಾಗಲೇ ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಮತ್ತಿತರ ನಾಯಕರು ಜೈಲಿಗೆ ಹೋಗಿದ್ದರು. ಹೀಗಾಗಿ ನ್ಯಾಯಾಲಯಗಳ ಬಗ್ಗೆ ಯಾರೂ ತಪ್ಪಾಗಿ ಭಾವಿಸಬಾರದು ಎಂದು ಅವರು ಹೇಳಿದರು.
ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ, ಜಾತೀಯತೆ, ಪಕ್ಷಾಪಾತದ ಬೇರುಗಳು ಭೂ ಗರ್ಭದ ಆಳಕ್ಕೆ ಹೋಗಿವೆ. ಅದನ್ನು ಅಷ್ಟು ಸುಲಭವಾಗಿ ಕಿತ್ತೊಗೆಯಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಪ್ರಜ್ಞಾವಂತ ಹಿರಿಯ ನಾಗರಿಕರು ಯುವ ತಲೆಮಾರನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ತಾವು ಸಾಯುವವರೆಗೂ ಅಧಿಕಾರದಲ್ಲಿಯೇ ಇರಬೇಕೆಂಬ ಮನಸ್ಥಿತಿಯನ್ನು ಬಿಡಬೇಕು. ನಮ್ಮ ಬದುಕಿಗೆ ಎಲ್ಲವನ್ನು ಕೊಟ್ಟ ಈ ದೇಶಕ್ಕಾಗಿ ಏನಾದರು ಮಾಡಬೇಕೆಂಬ ದೃಢ ಸಂಕಲ್ಪದೊಂದಿಗೆ ಪ್ರತಿಯೊಬ್ಬರು 60ವರ್ಷದ ನಂತರ ಸಮಾಜಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗಬೇಕೆಂದು ಅವರು ಆಶಿಸಿದರು.
ಜಿಲ್ಲಾ ನ್ಯಾಯಾಧೀಶನಾಗಿ, ಹೈಕೋರ್ಟ್‌ನ ನ್ಯಾಯಾಧೀಶನಾಗಿ ನನ್ನ ಸೇವಾವಧಿಯಲ್ಲಿ ಒಂದು ಅಡಿಯಷ್ಟು ಜಾಗವನ್ನೂ ಖರೀದಿಸಿಲ್ಲ. ಇಲ್ಲಿಯವರೆಗೂ ಮನೆಯನ್ನು ಕಟ್ಟಿಲ್ಲ. ಕಟ್ಟುವುದೂ ಇಲ್ಲ. ನನಗೆ ಬರುವ ನಿವೃತ್ತಿ ವೇತನವನ್ನು ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಕಾರ್ಯಕ್ರಮಕ್ಕೆ ಮೀಸಲಿಡುತ್ತಿದ್ದೇನೆಂದು ಅವರು ಹೇಳಿದರು.
ಅನರ್ಹ ಶಾಸಕರನ್ನು ಚುನಾವಣಾ ಪ್ರಕ್ರಿಯೆಯಿಂದಲೇ ಬಹಿಷ್ಕರಿಸುವಂತಹ ಕಾನೂನು ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಅನರ್ಹ ಶಾಸಕರೆಂದು ಒಪ್ಪಿಕೊಳ್ಳುತ್ತಲೇ ಅವರನ್ನು ಚುನಾವಣೆಯಲ್ಲಿ ಸ್ಪರ್ಧೆಸಲು ಅವಕಾಶ ನೀಡಿತ್ತು. ಆದರೆ, ಮತದಾರರಿಗೆ ಅನರ್ಹ ಶಾಸಕರಿಗೆ ಸರಿಯಾದ ಪಾಠ ಕಲಿಸುವ ಅವಕಾಶವಿತ್ತು. ಅದನ್ನು ಮತದಾರರು ಕೈ ಚೆಲ್ಲಿದರು. ನಮ್ಮ ಮತದಾರರನ್ನು ಪ್ರಜ್ಞಾವಂತರನ್ನಾಗಿ ಮಾಡಲು ಮತ್ತಷ್ಟು ಶ್ರಮಿಸಬೇಕಿದೆ.
-ಅರಳಿ ನಾಗರಾಜ, ವಿಶ್ರಾಂತ ನ್ಯಾಯಮೂರ್ತಿ







