ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಹಿಂಸಾಚಾರದಲ್ಲಿ 8 ವರ್ಷದ ಬಾಲಕ ಸಹಿತ 16 ಮಂದಿ ಮೃತ್ಯು

ಹೊಸದಿಲ್ಲಿ, ಡಿ. 21: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರಪ್ರದೇಶದಲ್ಲಿ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇವರಲ್ಲಿ ಓರ್ವ 8 ವರ್ಷದ ಬಾಲಕ ಕೂಡ ಸೇರಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೀರತ್‌ನಲ್ಲಿ ಐವರು, ಕಾನ್ಪುರ, ಬಿಜ್ನೂರು ಹಾಗೂ ಫಿರೋಜಾಬಾದ್‌ನಲ್ಲಿ ತಲಾ ಇಬ್ಬರು, ಮುಝಪ್ಫರ್‌ನಗರ್, ಸಂಭಾಲ್, ರಾಂಪುರ ಹಾಗೂ ವಾರಣಾಸಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದಲ್ಲದೆ ವಾರಣಾಸಿಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ ಸಂದರ್ಭ ಕಾಲ್ತುಳಿತಕ್ಕೆ ಸಿಲುಕಿ 8 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ.
ರಾಂಪುರದಲ್ಲಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು. 2 ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದರು ಹಾಗೂ ಬೆಂಕಿ ಹಚ್ಚಿದರು. ಈ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದಾನೆ.
ಮೀರತ್‌ನಲ್ಲಿ ಮೃತಪಟ್ಟ ಎಲ್ಲ ಐದು ಮಂದಿ ಗುಂಡಿನ ಗಾಯದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ಆರೋಪವನ್ನು ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ನಿರಾಕರಿಸಿದ್ದಾರೆ. ‘‘ನಾವು ಒಂದೇ ಒಂದು ಗುಂಡನ್ನು ಕೂಡ ಹಾರಿಸಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಯಾವುದೇ ಗುಂಡು ಹಾರಿದ್ದರೆ, ಅದು ಪ್ರತಿಭಟನಕಾರರ ಕಡೆಯಿಂದ’’ ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘‘ಝಹೀರ್, ಮೊಹ್ಸಿನ್, ನೂರ್ ಮುಹಮ್ಮದ್‌ರನ್ನು ನಿನ್ನೆ (ಶುಕ್ರವಾರ) ಇಲ್ಲಿಗೆ ತರುವಾಗ ಮೃತಪಟ್ಟಿದ್ದರು. ಆಸಿಫ್ ಎಂಬವರಿಗೆ ತಡ ರಾತ್ರಿ ಚಿಕಿತ್ಸೆ ನೀಡುತ್ತಿರುವ ಸಂದರ್ಭ ಮೃತಪಟ್ಟಿದ್ದಾರೆ’’ ಎಂದು ಮೀರತ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಹರ್ಷವರ್ಧನ್ ಹೇಳಿದ್ದಾರೆ. ‘‘ಇವರಲ್ಲದೆ, ಸಮೀಪದ ಜಿಲ್ಲೆಯ ಹಲವರನ್ನು ಇಲ್ಲಿಗೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಇವರಲ್ಲಿ ಓರ್ವರು ಪೊಲೀಸ್ ಕಾನ್ಸ್‌ಟೆಬಲ್ ಮೋಹಿತ್ ಶರ್ಮಾ ಕೂಡ ಸೇರಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಕ್ಷಿಪ್ರ ಕಾರ್ಯ ಪಡೆಯ ಮೂವರು ಸಿಬ್ಬಂದಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಓರ್ವ ಮಹಿಳಾ ಸಿಬ್ಬಂದಿ ಕೂಡ ಇದ್ದರು ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕಾಲ್ತುಳಿತಕ್ಕೆ ಸಿಲುಕಿ 8 ವರ್ಷದ ಬಾಲಕ ಸಾವು
ವಾರಣಾಸಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಕಾಲ್ತುಳಿತಕ್ಕೆ ಸಿಲುಕಿ 8 ವರ್ಷದ ಬಾಲಕ ಮುಹಮ್ಮದ್ ಸಗೀರ್ ಮೃತಪಟ್ಟಿದ್ದಾನೆ. ವಾರಣಾಸಿಯ ಬಜರ್‌ದೀಹಾ ಪ್ರದೇಶದಲ್ಲಿ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ಬಾಲಕ ಮೃತಪಟ್ಟ. ಬಾಲಕನ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ ನಡೆಯಿತು.







