ಸಾಲಿಫ್ ಉದ್ಯಾವರ್ ಗೆ ಈಯರ್ ಆಫ್ ದಿ ಸ್ಟೂಡೆಂಟ್ಸ್ ‘ನಜ್ಮೆ ಇಖ್ವಾನ್’ ಚಿನ್ನದ ಪದಕ
ನ್ಯೂ ಶಮ್ಸ್ ಸ್ಕೂಲ್ ನಲ್ಲಿ 48ನೇ ವಾರ್ಷಿಕೋತ್ಸವ ಸಮಾರಂಭ

ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿನ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ನ 48ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಆದ್ದೂರಿಯಾಗಿ ನಡೆಯಿತು.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತಮ ವಿದ್ಯಾರ್ಥಿಗೆ ನೀಡಲ್ಪಡುವ ಪ್ರತಿಷ್ಟಿತ ‘ಈಯರ್ ಆಫ್ ದಿ ಸ್ಟೂಡೆಂಟ್’ ನಜ್ಮೆ ಇಖ್ವಾನ್ ವಾರ್ಷಿಕ ಪ್ರಶಸ್ತಿಯನ್ನು ಸಾಲಿಫ್ ಆಹಮದ್ ಉದ್ಯಾವರ್ ಪಡೆದುಕೊಂಡರು. ಪ್ರಶಸ್ತಿಯುವ ಚಿನ್ನದ ಪದಕ ಹಾಗು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಗಂಗೋಳಿಯ ತೌಹಿದ್ ಎಜ್ಯುಕೇಶನ್ ಟ್ರಸ್ಟ್ ಪ್ರಧನ ಕಾರ್ಯದರ್ಶಿ ಅಖ್ತರ್ ಆಹಮದ್ ಖಾನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನುಕಂಪ, ಕರುಣೆ, ಸಾಮರಸ್ಯ, ಒಗ್ಗಟ್ಟು ದೇಶಪ್ರೇಮವನ್ನು ಬೆಳೆಸಬೇಕಾದುದು ಇಂದಿನ ಕಾಲದ ಬೇಡಿಕೆಯಾಗಿದೆ ಎಂದರು. ಶಾಲೆಯ ಹೆಸರಿನೊಂದಿಗೆ ಇಂದು ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತಿದೆ. ಉತ್ತಮ ಶಾಲೆಯ ವಿದ್ಯಾರ್ಥಿಗಳಲ್ಲಿ ನೈತಿಕತೆಯು ಉನ್ನತ ಮಟ್ಟದಲ್ಲಿರುತ್ತದೆ ಎಂದ ಅವರು, ತಮ್ಮ ಮಕ್ಕಳ ಮೇಲೆ ಭರವಸೆ, ವಿಶ್ವಾಸವನ್ನು ಇಟ್ಟುಕೊಳ್ಳಬೇಕೆಂದು ಪಾಲಕರಿಗೆ ಕಿವಿ ಮಾತು ಹೇಳಿದರೆ, ವಿದ್ಯಾರ್ಥಿಗಳು ಮುಬೈಲ್ ಮತ್ತು ದ್ವಿಚಕ್ರ ವಾಹನಗಳಿಂದ ದೂರ ಇರಬೇಕೆಂದು ಕಿವಿಮಾತು ಹೇಳಿದರು. ಭಟ್ಕಳದ ಪರಿಸರದಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವ ಇಲ್ಲ. ವಿದ್ಯಾರ್ಥಿಗಳು ಕನ್ನಡ ಕಲಿಕೆ ಕಡೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಬೇಕು. ಹಾಗೆಯೇ ಕನ್ನಡ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಯವ ಕಡೆಗೆ ಆಸಕ್ತಿಯನ್ನು ಬೆಳೆಸಬೇಕು ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಸೈಯ್ಯದ್ ಗುಫ್ರಾನ್ ಲಂಕಾ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿಗಳ ಪಾತ್ರ ಎಷ್ಟು ಮಹತ್ವವೋ ಅಷ್ಟೇ ಮಹತ್ವ ಪಾಲಕರದ್ದಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರ ಪ್ರತಿಭೆ ಗಳನ್ನು ಬೆಳೆಸಬೇಕಾದದು ಪಾಲಕರ ಕರ್ತವ್ಯ. ತಮ್ಮ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರ್ದ ಶತಮಾನಕ್ಕೆ ಸಮೀಪಿಸುತ್ತಿರುವ ಈ ಸಂಸ್ಥೆ ಅಭಿವೃದ್ಧಿ ಹಿಂದೆ ಅನೇಕಾರು ಮಂದಿ ಶ್ರಮಿಸಿದ್ದಾರೆ. ಶಿಕ್ಷಣದ ಉದ್ದೇಶ ಕೇವಲ ಪದವಿ ಗಳಿಸುವುದಲ್ಲ. ಅವರಲ್ಲಿನ ಉತ್ತಮ ಚಾರಿತ್ರ್ಯವನ್ನು ಅಭಿವೃದ್ಧಿ ಪಡಿಸುವುದು, ಅವರನ್ನು ತಿದ್ದಿ ತೀಡಿ ಸಮಾಜದ ಆಧಾರ ಸ್ಥಂಭ ಗಳನ್ನಾಗಿ ಮಾಡುವುದು ಶಿಕ್ಷಣ ಉದ್ದೇಶವಾಗಿದ್ದು ಇದರಲ್ಲಿ ಪಾಲಕರು, ಶಿಕ್ಷರು, ಆಡಳಿತ ಮಂಡಳಿಯ ಪಾಲು ಕೂಡ ಅಷ್ಟೆ ಮುಖ್ಯ ಆಗಿರುತ್ತದೆ. ಈ ನಿಟ್ಟಿನಲ್ಲಿ ತರಬಿಯತ್ ಎಜ್ಯುಕೇಶನ್ ಸಂಸ್ಥೆಯ ಹಿರಿಯರು ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಸಾಧಕರಿಗೆ ಪ್ರಶಸ್ತಿ: ಜೀವಮಾನದ ಸಾಧನೆಗಾಗಿ ಸಂಸ್ಥೆಯ ಸ್ಥಾಪಕ ಸದಸ್ಯ ಸಮಾಜ ಸೇವಕ ಸೈಯ್ಯದ್ ಹಸನ್ ಬರ್ಮಾವರ್, ಹಳೆಯ ವಿದ್ಯಾರ್ಥಿಗಳಿಗೆ ನೀಡುವ ಪ್ರೈಡ್ ಆಫ್ ಶಮ್ಸ್ (ಶಮ್ಸ್ ನ ಹೆಮ್ಮೆ) ಪ್ರಶಸ್ತಿಯನ್ನು ಪಿ.ಎಸ್.ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 48 ರ್ಯಾಂಕ್ ಪಡೆದ ಮುಷಾಹಿದ್ ಆಹ್ಮದ್ ಶೇಖ್ ರಿಗೆ ನೀಡಿ ಗೌರವಿಸಲಾಯಿತು. ಮಂಜುನಾಥ್ ಹೆಬ್ಬಾರ್‍ಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಮುಹಮ್ಮದ್ ಇಸ್ಹಾಖ್ ರಿಗೆ ಉತ್ತಮ ಶಾಲಾ ವಾಹನ ಚಾಲಕ ಪ್ರಶಸ್ತಿ ಹಾಗೂ 10ವರ್ಷದ ಸುರ್ದೀರ್ಘ ಸೇವೆಗಾಗಿ ಮೌಲಾನ ಅಬ್ದುಲ್ ಸುಭಾನ್ ನದ್ವಿಯವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೌಲಾನ ಝೀಯಾವುರ್ರಹ್ಮಾನ್ ರುಕ್ನುದ್ದೀನ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ನಾದಿರ್ ಆಹದ್ಮ ಇಕ್ಕೇರಿ, ಅಬ್ದುಲ್ ಕಾದಿರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಅಬ್ದಸುಭಾನ್ ನದ್ವಿ ವಂದಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಇಂಜಿನಿಯರ್ ನಝೀರ್ ಅಹ್ಮದ್ ಖಾಝಿ, ಮೌಲಾನ ಅಝೀಝರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಮೌಲಾನ ಎಸ್.ಎಂ.ಸೈಯದ್ಯ ಝುಬೈರ್, ಮೌಲಾನ ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ, ಮುಹಮ್ಮದ್ ರಝಾ ಮಾನ್ವಿ ಮತ್ತಿತರರು ಉಪಸ್ಥಿತರಿದ್ದರು.







