ಮುಸ್ಲಿಮರ ಮೇಲಿನ ದ್ವೇಷದಿಂದ ಪೌರತ್ವ ಕಾಯ್ದೆ ಜಾರಿ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು, ಡಿ. 21: ಮುಸ್ಲಿಮರ ಮೇಲಿನ ದ್ವೇಷದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪೌರತ್ವ ಕಾಯ್ದೆ ಮಸೂದೆಯನ್ನು ಜಾರಿಗೆ ತಂದಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ದ್ವೇಷದಿಂದ ಪೌರತ್ವ ಕಾಯ್ದೆ ಜಾರಿಮಾಡಿದ್ದಾರೆ. ಪಾಕಿಸ್ತಾ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದ ಜೈನ, ಬೌದ್ದ, ಸಿಖ್, ಪಾರ್ಸಿಯನ್ನರಿಗೆ ಪೌರತ್ವ ನೀಡುವುದಾಗಿ ಹೇಳಿದ್ದಾರೆ. ನಮ್ಮ ದೇಶದಲ್ಲೇ ಇರುವ ಮುಸಲ್ಮಾನರಿಗೆ ಏಕೆ ಪೌರತ್ವ ನೀಡಲಾಗುವುದಿಲ್ಲ, ಇನ್ನೂ ಶ್ರೀಲಂಕಾ, ತ್ರಿಪುರದಲ್ಲಿರುವ ಹಿಂದೂಗಳನ್ನೇಕೆ ಸಿಎಎ ಗೆ ತರಲು ನಿರ್ಧರಿಸಿಲ್ಲ ಎಂದು ಪ್ರಶ್ನಿಸಿದರು.
ನಾವು ಪೌರತ್ವ ಕಾಯ್ದೆ ವಿರೋಧ ಮಾಡುತ್ತಿಲ್ಲ, ಅದರೆ ಧರ್ಮದ ಹೆಸರಿನಲ್ಲಿ ಪೌರತ್ವ ನೀಡುವುದು ಸರಿಯಿಲ್ಲ ಎಂದು ಹೇಳುತಿದ್ದೇವೆ. ಮೇಲ್ನೋಟಕ್ಕೆ ಪೌರತ್ವ ಕಾಯ್ದೆ ಸರಿ ಇರಬಹುದು. ಇದರ ಒಟ್ಟಿಗೆ ಎನ್ ಆರ್ ಸಿ ಜಾರಿಮಾಡಿದರೆ ಮುಸ್ಲಿಮರಿಗಲ್ಲ ಹಿಂದೂಗಳಿಗೂ ತೊಂದರೆಯಾಗಲಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಎಎ ರೂಪಿಸಲಾಗಿದೆ. ಚುನಾವಣೆ ಬಂತೆಂದರೆ ಮೋದಿ, ಅಮಿತ್ ಶಾ ಮಾಸ್ಟರ್ ಮೈಂಡ್ ಉಪಯೋಗಿಸಿ ಬಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಟ್ಟು ಗೆಲ್ಲುವ ಪ್ರಯತ್ನ ಮಾಡುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ಮತ್ತು ಎನ್ ಆರ್ ಸಿ ಜಾರಿಯಾದರೆ ನಮ್ಮ ದೇಶದಲ್ಲಿರುವ ಆದಿವಾಸಿಗಳು, ಬುಡಕಟ್ಟು ಜನರಿಗೂ ತೊಂದರೆಯಾಗಲಿದ್ದು, ಪೌರತ್ವ ಸಾಭೀತು ಪಡಿಸು ಎಂದರೆ ಅವರು ಯಾವ ದಾಖಲೆ ನೀಡಿ ಪೌರತ್ವ ಸಾಭೀತು ಪಡಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ವಿರುದ್ದವಾಗಿ ಮತಹಾಕುವ ದಲಿತರು, ಮುಸ್ಲಿಮರು, ಹಿಂದುಳಿದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ತಮ್ಮ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕೆಲವು ಅನೈತಿಕ, ಅಸಂವಿಧಾನಿಕ ಕಾಯ್ದೆಯನ್ನು ಜಾರಿಗೆ ತಂದು ದೇಶದಲ್ಲಿ ಅಶಾಂತಿಯನ್ನು ಉಂಟು ಮಾಡುತಿದ್ದಾರೆ ಎಂದು ಕಿಡಿಕಾರಿದರು.
ಪೌರತ್ವ ಕಾಯ್ದೆಯನ್ನು ವಿರೋಧಿಸುವವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಪ್ರತಿಭಟನೆಗೆ ಅವಕಾಶ ನೀಡದೆ 144 ನೇ ಸೆಕ್ಚನ್ ಜಾರಿಗೊಳಿಸಿ ಜನರಿಗೆ ಭಯವ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇವರ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು, ಇವರು ಹೇಳಿದ್ದನ್ನು ಕೇಳಬೇಕು ಎಂಬ ಮನೋಬಾವವನ್ನು ಮೋದಿ, ಅಮಿತ್ ಶಾ ಹೊಂದಿದ್ದಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿಯಾದರೆ ಸಾಮಾನ್ಯರ ಗತಿಯೇನು: ಮಂಗಳೂರಿಗೆ ಬರಬಾರದು ಎಂದು ಜನಪ್ರಿಯ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೂಡುತ್ತಾರೆ ಎಂದರೆ ಇನ್ನು ಸಾಮಾನ್ಯ ಜನರ ಗತಿಯೇನು ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಗೋಲಿಬಾರ್ ನಿಂದ ಸಾವನ್ನಪ್ಪಿದ ಇಬ್ಬರು ಯುವಕರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವಾನ ಹೇಳುವುದನ್ನು ತಪ್ಪಿಸುವ ಸಲುವಾಗಿ ನೋಟಿಸ್ ನೀಡಲಾಗಿದೆ. ಓರ್ವ ಜನನಾಯಕ ಕಷ್ಟ ಕೇಳಲು ಹೋಗುವುದನ್ನೆ ಇವರು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕೆಪಿಸಿಸಿ ನಗರಪಾಲಿಕೆ ಸದಸ್ಯರುಗಳಾಧ ಶ್ರೀಧರ್, ಹಾಜಿರಾ ಸೀಮಾ ಉಪಸ್ಥಿತರಿದ್ದರು.
ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆಯನ್ನು ಬಿಜೆಪಿಯವರು ತಪ್ಪಾಗಿ ತಿರುಚುತಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಮಾಜಿ ಸಚಿವ ಯು.ಟಿ.ಖಾದರ್ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ ಕರ್ನಾಟಕ ಶಾಂತಿ ಪ್ರಿಯ ನಾಡು ಇಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದಷ್ಟೇ ಹೇಳಿರುವುದು. ಆದರೆ ಬಿಜೆಪಿಯವರು ಬೆಂಕಿ ಹಚ್ಚಬೇಕಾಗುತ್ತದೆ ಎಂದು ಖಾದರ್ ಹೇಳಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಜನರಿಗೆ ನೀಡುತಿದ್ದಾರೆ. ಮಾಧ್ಯಮಗಳು ಸಹ ಅವರ ಹೇಳಿಕೆಯನ್ನು ಅರ್ಥೈಸಿಕೊಳ್ಳದೆ ಸುದ್ದಿಯನ್ನು ತಪ್ಪಾಗಿ ಪ್ರಕಟಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.







