ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ನಡೆಸುತಿದ್ದಾರೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು, ಡಿ.21: ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಕಿಡಿಕಾರಿದರು.
ಅರವಿಂದನಗರದಲ್ಲಿ ಗಾಂಧಿಪರಿಷತ್ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ನಾಗರೀಕರ ಮೇಲೆ ಒತ್ತಡ ಹೇರುವ ಕೆಲಸ ಯಾರೂ ಮಾಡಬಾರದು. ಈ ನಿಟ್ಟಿನಲ್ಲಿ ಮಸೂದೆಯ ಮೂಲಕ ಜನರಿಗೆ ಒತ್ತಡ ಹೇರಬಾರದು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ಜನರ ಪ್ರತಿಭಟನೆಯ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದರು. ಮಂಗಳೂರಿಗೆ ಕಾಂಗ್ರೆಸ್ ನಾಯಕರ ತಡೆ ಕುರಿತು ಪ್ರತಿಕ್ರಿಯಿಸಿ ಗೃಹ ಸಚಿವ ಹಾಗೂ ಸಿಎಂ ಅವರಿಗೆ ಇರುವ ಕಾನೂನು ನಮಗಿಲ್ಲವೇ. ಮೃತರ ಕುಟುಂಬಕ್ಕೆ ಭದ್ರತೆ ಕಲ್ಪಿಸಬೇಕು. ಶೀಘ್ರ ಪರಿಹಾರ ನೀಡಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನನ್ನ ಅವಧಿಯಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿ ಆಗಿರುವ ಬಗ್ಗೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರೇ ಹೊಗಳುತ್ತಿದ್ದಾರೆ. ಇದನ್ನು ನಮ್ಮ ಪಕ್ಷ ಸದುಪಯೋಗ ಪಡಿಸಿಕೊಳ್ಳಬೇಕಿತ್ತು ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀವೂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.





