ಬೆಂಗಳೂರು: ಸುರಕ್ಷತಾ ಕ್ರಮಗಳ ಕುರಿತ ತರಬೇತಿ ಕಾರ್ಯಾಗಾರ

ಬೆಂಗಳೂರು, ಡಿ.21: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಇವರ ಸಹಭಾಗಿತ್ವದೊಂದಿಗೆ ಖಾಸಗಿ ನಿರ್ಮಲೀಕರಣ ಕೆಲಸಗಾರರಿಗೆ 12 ದಿನಗಳ ಸುರಕ್ಷತಾ ಕ್ರಮಗಳ ಕುರಿತ ಎರಡನೇ ತಂಡದ ತರಬೇತಿ ಕಾರ್ಯಾಗಾರವನು ಮಲ್ಲೇಶ್ವರಂನ ಸುವರ್ಣ ಭವನ ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದಲ್ಲಿ ನೋಂದಾಯಿತರಾದ ಸುಮಾರು 75 ನಿರ್ಮಲೀಕರಣ ಕೆಲಸಗಾರರಿಗೆ ತರಗತಿ ಮತ್ತು ಪ್ರಾಯೋಗಿಕ ತರಬೇತಿಯನ್ನು ಮಂಡಳಿಯ ನುರಿತ ಹಿರಿಯ ಅಧಿಕಾರಿಗಳಿಂದ ಹಾಗೂ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಿಂದ ಒಳಚರಂಡಿ ನಿರ್ಮಲೀಕರಣಕ್ಕೆ ಯಂತ್ರೋಪಕರಣಗಳ ಪ್ರಾಮುಖ್ಯತೆ ಹಾಗೂ ವಿವಿಧ ಯಂತೊ್ರೀಪಕರಣಗಳ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಪ್ರಧಾನ ಅಭಿಯಂತರ ಕೆಂಪರಾಮಯ್ಯ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ನೀಡಿದರು. ಸಮಾರಂಭದಲ್ಲಿ ಅಪರ ಮುಖ್ಯ ಅಭಿಯಂತರ(ನಿರ್ವಹಣೆ) ಬಿ.ಸುರೇಶ್, ಕಾರ್ಯದರ್ಶಿ ಆರ್.ರಮಾ, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಬಿ.ಎಂ.ಮಂಜುನಾಥ್ ಉಪಸ್ಥಿತರಿದ್ದರು.





