ಮಂಗಳೂರಿನ ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು: ಬೇಕಲ್ ಉಸ್ತಾದ್

ಮಂಗಳೂರು: ಮಂಗಳೂರಿನಲ್ಲಿ ಗುರುವಾರ ಪೊಲೀಸರ ಗೋಲಿಬಾರ್ ಗೆ ಇಬ್ಬರು ಬಲಿಯಾದ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ವೇಳೆ ಗೋಲಿಬಾರ್ ಮಾಡಬೇಕಾದ ಅವಶ್ಯಕತೆಯಾದರು ಏನಿತ್ತು ? ಮತ್ತು ಪ್ರತಿಭಟನೆಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸ್ ವೈಫಲ್ಯವೇ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಅಲ್ಲದೇ ಪೊಲೀಸರೇ ಮಾತಾಡುತ್ತಿರುವ ಕೆಲವೊಂದು ವೀಡಿಯೊ ತುಣುಕುಗಳು ವೈರಲ್ ಆಗುತ್ತಿದ್ದು ಇದು ಪೂರ್ವಯೋಜಿತವೋ ಎನ್ನುವ ಸಂಶಯ ಹುಟ್ಟಿಸುತ್ತದೆ.
ಸಿಎಎ ವಿರುದ್ಧ ಜಿಲ್ಲೆಯ ವಿವಿಧ ಸಂಘಟನೆಗಳು ಶಾಂತಿಯುತವಾಗಿ ಮೊದಲೇ ಪ್ರತಿಭಟನೆ ನಡೆಸಲು ಅನುಮತಿ ಕೇಳಿಯೂ ನಿರಾಕರಿಸಿದ್ದು ಇಂತಹ ಅನಾಹುತಕ್ಕೆ ಕಾರಣವಾಯಿತೇ ಎನ್ನುವ ಸಂಶಯಗಳು ಕೇಳಿ ಬರುತ್ತಿದೆ. ಇವೆಲ್ಲದಕ್ಕೂ ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಂಶವನ್ನು ಹೊರತರಲೇಬೇಕೆಂದು ಒತ್ತಾಯಿಸಿದರು.
ಮಂಗಳೂರು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು ಎಲ್ಲರೂ ಶಾಂತಿಯನ್ನು ಕಾಪಾಡಬೇಕೆಂದು ಅವರು ಮನವಿ ಮಾಡಿದರು.





