ಬೆಳ್ಳಂದೂರು ಕೆರೆಗೆ ವಿಷಯುಕ್ತ ನೀರು ತಡೆಗೆ ಕ್ರಮಕ್ಕೆ ರಾಜ್ಯ ಸರಕಾರಕ್ಕೆ ಸೂಚನೆ
ಬೆಂಗಳೂರು, ಡಿ.21: ನಗರದ ಬೆಳ್ಳಂದೂರು ಕೆರೆಗೆ ಪ್ರತಿದಿನ 256.7 ಮಿಲಿಯನ್ ಲೀಟರ್ ಗಳಷ್ಟು ಸಂಸ್ಕರಿಸದ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿರುವುದು ಕ್ರಿಮಿನಲ್ ಅಪರಾಧವೆಂದು ಹೇಳಿರುವ ದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‌ಜಿಟಿ), ಕೆರೆಗೆ ಸೇರುತ್ತಿರುವ ಈ ವಿಷವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ಸೂಚನೆಗಳನ್ನು ನೀಡಿದೆ.
ಕೆರೆಗೆ ಸೇರುವ ಕೊಳಚೆ ನೀರನ್ನು ಸಂಸ್ಕರಿಸಲು ಘಟಕಗಳನ್ನು ಸ್ಥಾಪಿಸಲು ಹಾಗೂ ಕೊಳಚೆ ನೀರಿಗಾಗಿ ಪ್ರತ್ಯೇಕ ಚರಂಡಿಗಳನ್ನು ನಿರ್ಮಿಸಲು ಈಗಾಗಲೇ ವಿಧಿಸಲಾಗಿರುವ 2020ರ ಸೆ. 30ರ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗದು ಎಂದು ನ್ಯಾಯಪೀಠ ಖಡಕ್ ಆಗಿದೆ ಹೇಳಿದೆ. ಈ ನಿಟ್ಟಿನಲಿ ಕೆಲವು ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಪಾಲಿಸಿದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಜಾರಿಗೊಳಿಸಬಹುದಾದ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.
ನಿಗದಿತ ಗಡುವಿನೊಳಗೆ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಸ್ಥಾಪನೆ ಪೂರ್ತಿಯಾಗದಿದ್ದರೆ, ಅಂಥ ಅಪೂರ್ಣವಾದ ಪ್ರತಿ ಘಟಕಕ್ಕೆ ಮಾಸಿಕ 10 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ. ಆ ದಂಡವನ್ನು, ಈ ಘಟಕಗಳ ನಿರ್ಮಾಣದ ಹೊಣೆ ಹೊತ್ತಿರುವ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕು. ಘಟಕಗಳನ್ನು ಸ್ಥಾಪಿಸದ ಅಧಿಕಾರಿಗಳ ಸೇವಾ ರಿಜಿಸ್ಟರ್‌ನಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡದೇ ಚ್ಯುತಿ ತಂದಿದ್ದಾರೆ ಎಂದು ನಮೂದಿಸಲಾಗುತ್ತದೆ.
ಘಟಕಗಳ ನಿರ್ಮಾಣವಾಗುವವರೆಗೆ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗದಿರುವ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಖಾತ್ರಿಪಡಿಸಬೇಕು. ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲು ಜಲಮಂಡಳಿ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಇದು ತಪ್ಪಿದರೆ, ಕೆರೆಗೆ ಕಲುಷಿತ ನೀರು ಸೇರುವ ಪ್ರತಿಯೊಂದು ಮಾರ್ಗವೊಂದರ ಮೇಲೆ 5 ಲಕ್ಷ ರೂ.ಗಳಂತೆ ಜಲಮಂಡಳಿ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ನ್ಯಾಯಮಂಡಳಿ ಎಚ್ಚರಿಕೆಯನ್ನು ನೀಡಲಾಗಿದೆ.







