ಬಂಟ್ವಾಳ ತಾ. ಅಮೆಚೂರ್ ಕಬಡ್ಡಿ ಎಸೋಸಿಯೇಶನ್: ವಾರ್ಷಿಕ ಮಹಾಸಭೆ

ಬಂಟ್ವಾಳ : ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್ ರೋಟರಿ ಬಾಲಭವನ ಸಭಾಂಗಣದಲ್ಲಿ ರವಿವಾರ ನಡೆಯಿತು.
ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಎಸೋಸಿಯೇಶನ್ ನಿಯಮಾವಳಿ ಪ್ರಕಾರ ಕಬಡ್ಡಿ ಪಂದ್ಯಾಟ ನಡೆಸಲಾಗುತ್ತಿದ್ದು, ಕಬಡ್ಡಿ ಸಂಘಟಕರು, ಆಟಗಾರರು ಸಹಕರಿಸಬೇಕು ಎಂದು ಹೇಳಿದರು.
ಕಬಡ್ಡಿ ಶಿಸ್ತಿನ ಕ್ರೀಡೆಯಾಗಿದ್ದು, ಆಟಗಾರರು, ಸಂಘಟಕರು ಕಬಡ್ಡಿಯಲ್ಲಿ ಆಸಕ್ತಿ ವಹಿಸಿ, ಕ್ರೀಡೆಯ ಮೇಲಿನ ಗೌರವ ಉಳಿಸಬೇಕು. ಕಬಡ್ಡಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಎಸೋಸಿಯೇಶನ್ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಉದಯ ಕುಮಾರ್ ಚೌಟ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಅಪ್ಪಟ ದೇಸೀ ಕ್ರೀಡೆಯಾದ ಕಬಡ್ಡಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದ್ದು, ಆಟಗಾರರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತಿದೆ. ಕಬಡ್ಡಿಯ ಅಭಿವೃದ್ದಿಗೆ ಎಸೋಸಿಯೇಶನ್ ಬದ್ಧವಾಗಿದೆ ಎಂದ ಅವರು, ವ್ಯಾಪಾರಿ ಮನೋಭಾವನೆ ಬಿಟ್ಟು ದೇಶಕ್ಕಾಗಿ ಕಬಡ್ಡಿ ಎಂಬ ಮನೋಭಾವನೆ ಬೆಳೆಸಬೇಕಾಗಿದೆ ಎಂದರು.
ಬಂಟ್ವಾಳ ಕಬಡ್ಡಿ ಎಸೋಸಿಯೇಶನ್ ಕಾರ್ಯಾಧ್ಯಕ್ಷ ಪುಷ್ಪರಾಜ ಚೌಟ, ಪೋಷಕ ರೋ| ಮಂಜುನಾಥ ಆಚಾರ್ಯ, ಉಪಾಧ್ಯಕ್ಷರಾದ ರಮಾನಾಥ ವಿಟ್ಲ, ಬಾಲಕೃಷ್ಣ ನರಿಕೊಂಬು, ಬಾಬು ಮಾಸ್ಟರ್ ತುಂಬೆ, ಲ| ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಎಸೋಸಿಯೇಶನ್ ಸದಸ್ಯರು, ಕಬಡ್ಡಿ ತಂಡದ ಆಟಗಾರರು, ಕಬಡ್ಡಿ ಪಂದ್ಯಾಟದ ಸಂಘಟಕರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಉಮಾನಾಥ ರೈ ಮೇರಾವು ಅವರು ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕರ್ಣ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.







